ಭಯೋತ್ಪಾದನೆ ವಿರುದ್ಧ ಒಂದಾಗಿ : ಜಗತ್ತಿಗೆ ಮೋದಿ ಕರೆ

Update: 2016-04-01 14:27 GMT

 ವಾಶಿಂಗ್ಟನ್, ಎ. 1: ಭಯೋತ್ಪಾದನೆಯ ವಿರುದ್ಧ ಒಂದಾಗುವಂತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಜಗತ್ತಿಗೆ ಬಲವಾದ ಮನವಿ ಮಾಡಿದ್ದಾರೆ. ‘‘ಭಯೋತ್ಪಾದನೆ ಕೃತ್ಯಗಳನ್ನು ತಡೆಯದ ಹಾಗೂ ಭಯೋತ್ಪಾದಕರಿಗೆ ಶಿಕ್ಷೆಯಾಗದ ಹೊರತು, ಪರಮಾಣು ಭಯೋತ್ಪಾದನೆಯನ್ನು ತಡೆಯಲು ಸಾಧ್ಯವಿಲ್ಲ’’ ಎಂದಿದ್ದಾರೆ.

‘‘ಭಯೋತ್ಪಾದನೆ ಯಾರದೋ ಸಮಸ್ಯೆ; ಅವನ ಭಯೋತ್ಪಾದಕ ನನ್ನ ಭಯೋತ್ಪಾದಕನಲ್ಲ ಎನ್ನುವ ಮನೋಭಾವವನ್ನು ಬಿಟ್ಟುಬಿಡಿ’’ ಎಂದು ಪ್ರಧಾನಿ ನುಡಿದರು. ಪರಮಾಣು ಭದ್ರತಾ ಶೃಂಗ ಸಮ್ಮೇಳನದಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಏರ್ಪಡಿಸಿದ ಔತಣಕೂಟದಲ್ಲಿ ಅವರು ಮಾತನಾಡುತ್ತಿದ್ದರು.

‘‘ಭಯೋತ್ಪಾದನೆ ಅಂತಾರಾಷ್ಟ್ರೀಯ ಜಾಲವನ್ನು ಹೊಂದಿದೆ. ಆದರೆ, ಈ ಬೆದರಿಕೆಯನ್ನು ತೊಡೆದುಹಾಕಲು ನಾವು ಈಗಲೂ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದೇವೆ’’ ಎಂದು ಅವರು ನುಡಿದರು.

ರಾಷ್ಟ್ರಗಳ ನಡುವೆ ಉತ್ತಮ ಸಹಕಾರದ ಅಗತ್ಯವನ್ನು ಪ್ರತಿಪಾದಿಸಿದ ಅವರು, ‘‘ಭಯೋತ್ಪಾದನೆ ಆಧುನೀಕರಣಗೊಂಡಿದೆ. ಭಯೋತ್ಪಾದಕರು 21ನೆ ಶತಮಾನದ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಆದರೆ, ಅದಕ್ಕೆ ನಮ್ಮ ಪ್ರತಿಕ್ರಿಯೆ ಪ್ರಾಚೀನ ಕಾಲದ್ದಾಗಿದೆ’’ ಎಂದರು.

‘‘ಭಯೋತ್ಪಾದನೆಯ ಸಂಪರ್ಕ ಮತ್ತು ಪೂರೈಕೆ ಸರಪಳಿ ಜಾಗತಿಕವಾಗಿದೆ. ಆದರೆ, ಈ ವಿಷಯದಲ್ಲಿ ದೇಶಗಳ ನಡುವೆ ಪ್ರಾಮಾಣಿಕ ಸಹಕಾರವಿಲ್ಲ’’ ಎಂದು ಪ್ರಧಾನಿ ವಿಷಾದಿಸಿದರು.

‘‘ಪರಮಾಣು ಭದ್ರತೆ ಎನ್ನುವುದು ಕಡ್ಡಾಯ ರಾಷ್ಟ್ರೀಯ ಆದ್ಯತೆಯಾಗಬೇಕು. ತಮ್ಮ ಅಂತಾರಾಷ್ಟ್ರೀಯ ಬಾಧ್ಯತೆಗಳನ್ನು ಎಲ್ಲ ದೇಶಗಳು ಸಂಪೂರ್ಣವಾಗಿ ಈಡೇರಿಸಬೇಕು’’ ಎಂದು ಮೋದಿ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News