×
Ad

ಹಣ ಖರ್ಚು ಮಾಡುವುದೇ ಸರಕಾರದ ಸಾಧನೆಯೇ?

Update: 2016-04-01 23:11 IST

ಮಾನ್ಯರೆ,

ಇತ್ತೀಚೆಗೆ ಮುಖ್ಯಮಂತ್ರಿಗಳು ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆಯ ಸಭೆಯಲ್ಲಿ ಮೀಸಲಿಟ್ಟ ಹಣದಲ್ಲಿ ಶೇ.40 ರಷ್ಟು ಮಾತ್ರವೇ ಖರ್ಚಾಗಿದ್ದು ಉಳಿದ ಹಣ ಖರ್ಚಾಗದೆ ಇರುವ ಬಗ್ಗೆ ನಿಷ್ಠುರವಾಗಿ ಮಾತನಾಡಿರುತ್ತಾರೆ. ಅವರ ಕಾಳಜಿ ಮತ್ತು ಕಳಕಳಿ ಮೆಚ್ಚುವಂತಹದ್ದು.ಆದರೆ ರಾಜ್ಯ ಸರಕಾರ ಮುಂಗಡ ಪತ್ರದಲ್ಲಿ ಪ್ರತಿಯೊಂದು ಇಲಾಖೆಗಳಿಗೆ ವಿವಿಧ ಯೋಜನೆಗಳಿಗಾಗಿ ಮೀಸಲಿಟ್ಟಂತಹ ಹಣ ಆ ವರ್ಷದ ಆರ್ಥಿಕ ಅವಧಿಯ ಅಂತ್ಯದ ಒಳಗಾಗಿ ಸಂಪೂರ್ಣವಾಗಿ ಖರ್ಚು ಮಾಡಿದಾಗ ಮಾತ್ರ ನೂರಕ್ಕೆ ನೂರರಷ್ಟು ಸಾಧನೆಯಾಗಿದೆ ಎಂಬ ಸಾಮಾನ್ಯ ಅಭಿಪ್ರಾಯವು ಇದೆ. ಆದರೆ ರಾಜ್ಯ ಸರಕಾರ ಮುಂಗಡ ಪತ್ರದಲ್ಲಿ ವಿವಿಧ ಇಲಾಖೆಗಳಿಗೆ ಮೀಸಲಿಡುವ ಹಣ ಕೇವಲ ಖರ್ಚಾಗಬೇಕೆನ್ನುವ ಕಾರಣ ಖರ್ಚು ಮಾಡುವುದೇ ಹೆಚ್ಚಾಗಿದೆ. ಮೀಸಲಿಟ್ಟ ಹಣ ಸಂಪೂರ್ಣವಾಗಿ ಖರ್ಚಾಗದಿದ್ದರೂ ಪರವಾಗಿಲ್ಲ ಸರಿಯಾದ ರೀತಿಯಲ್ಲಿ ಸದ್ಬಳಕೆಯಾಗಿದೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕೇವಲ ಖರ್ಚು ಮಾಡುವ ಸಲುವಾಗಿ ಯೋಜನೆಗಳನ್ನು ರೂಪಿಸಿ ಮಧ್ಯವರ್ತಿಗಳ ಜೇಬು ತುಂಬಿಸುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿ ಖರ್ಚು ಮಾಡಿದ ಮಾತ್ರಕ್ಕೆ ಇಲಾಖೆಯಲ್ಲಿ ಸಾಧನೆಯೂ ಆಗುವುದಿಲ್ಲ ಹಾಗೂ ಆ ಹಣ ನಿಜವಾದ ಫಲಾನುಭವಿಗಳಿಗೆ ಮುಟ್ಟುವುದಿಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ,ಸಮಾಜ ಕಲ್ಯಾಣ ಇಲಾಖೆ,ಆರೋಗ್ಯ ಇಲಾಖೆ ಲೋಕೋಪಯೋಗಿ ಇಲಾಖೆ ಮುಂತಾದ ಇಲಾಖೆಗಳಲ್ಲಿ ನಿಜಕ್ಕೂ ಜನರಿಗೆ ಆವಶ್ಯಕವಿರುವ ಮತ್ತು ಸಮಾಜದ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳನ್ನು ಬದಲಾಯಿಸಬಲ್ಲಂತಹ ಮತ್ತು ಪರಿಣಾಮವನ್ನು ಬೀರಬಲ್ಲಂತಹ ಯೋಜನೆಗಳನ್ನು ಮಾತ್ರ ರೂಪಿಸಿ ಅದಕ್ಕೆ ಹಣವನ್ನು ಬಿಡುಗಡೆ ಮಾಡಿ ಖರ್ಚಾಗುವ ಪ್ರತಿಯೊಂದು ಪೈಸೆಗೂ ಸರಿಯಾದಂತಹ ಅರ್ಥವಿರಬೇಕು.ಕೇವಲ ಹಣ ಖರ್ಚು ಮಾಡುವುದೇ ಸಾಧನೆಗಳಾದರೆ ಸಾಧಿಸಿದ್ದು ಮಾತ್ರ ಶೂನ್ಯವಾಗುತ್ತದೆ. ಅನೇಕ ದಶಕಗಳಿಂದ ಅನೇಕ ಇಲಾಖೆಗಳಲ್ಲಿ ಹಣ ಖರ್ಚಾಗುತ್ತಲೇ ಇದೆ. ತಿಂದವರೇ ತಿನ್ನುತ್ತಿದ್ದಾರೆ. ಮಧ್ಯವರ್ತಿಗಳ ಜೇಬು ತುಂಬುತ್ತಿವೆ. ಧ್ವನಿ ಇಲ್ಲದ ಅನೇಕ ಕುಟುಂಬಗಳು ಇಂದಿಗೂ ಸಹ ಸರಕಾರದ ಸೌಲಭ್ಯಗಳ ಬಿಡಿಕಾಸು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
 

Similar News