ಐಪಿಎಲ್‌ನಲ್ಲಿ ಆಡಿದ ಅನುಭವ ವರದಾನವಾಯಿತು: ಸಿಮನ್ಸ್
ಮುಂಬೈ, ಎ.1: ‘‘ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿರುವ ಅನುಭವ ತಂಡದ ನಿರ್ಣಾಯಕ ಪಂದ್ಯದಲ್ಲಿ ಉತ್ತಮ ಇನಿಂಗ್ಸ್ ಆಡಲು ನೆರವಾಯಿತು’’ ಎಂದು ವೆಸ್ಟ್‌ಇಂಡೀಸ್‌ನ ಗೆಲುವಿನ ರೂವಾರಿ ಲೆಂಡ್ಲ್ ಸಿಮನ್ಸ್ ಹೇಳಿದ್ದಾರೆ.
ಗುರುವಾರ ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ವಿರುದ್ಧದ ಎರಡನೆ ಸೆಮಿ ಫೈನಲ್‌ನಲ್ಲಿ ಔಟಾಗದೆ 82 ರನ್ ಗಳಿಸಿದ್ದ ಸಿಮನ್ಸ್ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದ್ದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಗೌರವ ಪಡೆದಿದ್ದರು.
‘‘ಅಫ್ಘಾನಿಸ್ತಾನದ ಪಂದ್ಯದ ನಂತರ ನನಗೆ ಕರೆ ಮಾಡಿದ ಮ್ಯಾನೇಜರ್, ವಿಶ್ವಕಪ್ ಪಂದ್ಯ ಆಡಲು ಫಿಟ್ ಇದ್ದೀರಾ ಎಂದು ಕೇಳಿದ್ದರು. ಅದಕ್ಕೆ ನಾನು ಹೌದು, ಆಡಲು ಸಿದ್ದನಿದ್ದೇನೆ ಎಂದು ಉತ್ತರಿಸಿದ್ದೆ. ನಾನು ಐಪಿಎಲ್‌ಲ್ಲಿ ಆಡಲು ಭಾರತಕ್ಕೆ ತೆರಳಲು ಸಿದ್ಧವಾಗಿದ್ದೆ. ಐಪಿಎಲ್‌ನಲ್ಲಿ ಮುಂಬೈ ತಂಡದಲ್ಲಿ ಆಡುತ್ತಿರುವ ತನಗೆ ಮುಂಬೈನ ವಾಂಖೆಡೆ ಸ್ಟೇಡಿಯಂ ಎರಡನೆ ತವರು ಮೈದಾನವಿದ್ದಂತೆ. ಐಪಿಎಲ್‌ನಲ್ಲಿ ಆಡಿರುವ ಅನುಭವ ನನಗೆ ನಿಜವಾಗಿಯೂ ನೆರವಾಯಿತು’’ ಎಂದು ಪಂದ್ಯ ನಂತರದ ಪತ್ರಿಕಾಗೋಷ್ಠಿಯಲ್ಲಿ ಸಿಮನ್ ತಿಳಿಸಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ವೇಳೆ ಆ್ಯಂಡ್ರು ಫ್ಲೆಚರ್ ಗಾಯಗೊಂಡು ಟೂರ್ನಿಯಿಂದ ಹೊರ ನಡೆದ ಕಾರಣ ಸಿಮನ್ಸ್‌ಗೆ ತಂಡ ಸೇರಿಕೊಳ್ಳಲು ಕರೆ ನೀಡಲಾಗಿತ್ತು.
‘‘ಕ್ರಿಸ್ ಗೇಲ್ ಕೇವಲ 5 ರನ್‌ಗೆ ಔಟಾದ ಹೊರತಾಗಿಯೂ ವಿಂಡೀಸ್ ಗೆಲುವು ಸಾಧಿಸಿದ್ದು ತಂಡದ ಬ್ಯಾಟಿಂಗ್ ಸರದಿಯ ಸಾಮರ್ಥ್ಯವನ್ನು ತೋರಿಸುತ್ತಿದೆ. ವಿಂಡೀಸ್ ಒನ್ ಮ್ಯಾನ್ ಶೋವನ್ನು ಅವಲಂಬಿಸಿಲ್ಲ ಎಂದು ಈ ಚೇಸಿಂಗ್ ಸಾಬೀತುಪಡಿಸಿದೆ. ಆರಂಭಿಕ ಆಟಗಾರರು ಬೇಗನೆ ಔಟಾದರೂ ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದು ತಂಡದ ಶಕ್ತಿಯನ್ನು ತೋರ್ಪಡಿಸುತ್ತಿದೆ’’ ಎಂದು ಸಿಮನ್ಸ್ ಹೇಳಿದ್ದಾರೆ.