ಇಂದು ಸೌದಿ ಅರೇಬಿಯಾಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಪ್ರಮುಖ ಒಪ್ಪಂದಕ್ಕೆ ಸಹಿ ಸಾಧ್ಯತೆ
ರಿಯಾದ್, ಎ.3: ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲಿದ್ದು, ಕಿಂಗ್ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಅಲ್ ಸೌದ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
2010ರ ನಂತರ ಭಾರತದ ಪ್ರಧಾನಿಯೊಬ್ಬರು ಗಲ್ಫ್ ರಾಷ್ಟ್ರಕ್ಕೆ ಭೇಟಿ ನೀಡುತ್ತಿದ್ದಾರೆ. 2010ರಲ್ಲಿ ಮನಮೋಹನ್ ಸಿಂಗ್ ಗಲ್ಫ್ ರಾಷ್ಟ್ರಕ್ಕೆ ಪ್ರವಾಸ ಕೈಗೊಂಡಿದ್ದರು. ವಾಶಿಂಗ್ಟನ್ ಡಿಸಿಯಲ್ಲಿ ಪರಮಾಣು ಭದ್ರತಾ ಶೃಂಗ ಸಮ್ಮೇಳನದಲ್ಲಿ ಭಾಗವಹಿಸಿದ್ದ ಮೋದಿ ಅಮೆರಿಕದಿಂದ ತಡರಾತ್ರಿ ಸೌದಿಗೆ ಪ್ರಯಾಣ ಬೆಳಸಿದ್ದರು.
‘‘ಸೌದಿ ಅರೇಬಿಯದೊಂದಿಗೆ ಭಾರತದ ಸಂಬಂಧ ಅತ್ಯಂತ ವಿಶೇಷವಾದುದು. ಸೌದಿ ಉದ್ಯಮಿಗಳು ಭಾರತದ ಅಭಿವೃದ್ದಿಯ ಯೋಜನೆಯಲ್ಲಿ ಭಾಗಿಯಾಗುವುದನ್ನು ತಾನು ಬಯಸುವೆ’’ಎಂದು ಮೋದಿ ತ್ರಿರಾಷ್ಟ್ರ ಪ್ರವಾಸಕ್ಕೆ ಮೊದಲು ಹೊಸದಿಲ್ಲಿಯಲ್ಲಿ ಹೇಳಿಕೆ ನೀಡಿದ್ದರು.
ಶನಿವಾರ ಮಧ್ಯಾಹ್ನ ರಿಯಾದ್‌ಗೆ ತಲುಪಲಿರುವ ಮೋದಿ ಐತಿಹಾಸಿಕ ಮಸ್ಮಕ್ ಫೋರ್ಟ್‌ಗೆ ಭೇಟಿ ನೀಡುವರು. ಭಾರತ ಸಮುದಾಯವನ್ನು ಭೇಟಿಯಾಗಲಿರುವ ಮೋದಿ, ಎಲ್ ಆ್ಯಂಡ್ ಟಿ ಉದ್ಯೋಗಿಗಳು ವಾಸ್ತವ್ಯವಿರುವ ಸಂಕೀರ್ಣಕ್ಕೆ ಭೇಟಿ ನೀಡುವರು.
ಕಿಂಗ್ ಸಲ್ಮಾನ್, ಮೋದಿ ಅವರಿಗೆ ವಿಶೇಷ ಭೋಜನ ಕೂಟ ಏರ್ಪಡಿಸಲಿದ್ದು, ಇದರಲ್ಲಿ ಸೌದಿಯ ಪ್ರಮುಖ ಸಚಿವರುಗಳು ಹಾಗೂ ಇತರ ಮುಖಂಡರು ಉಪಸ್ಥಿತರಿರುತ್ತಾರೆ. ಭೋಜನ ಕೂಟದ ಬಳಿಕ ನಿಯೋಗ ಮಟ್ಟದ ಸಭೆ ಹಾಗೂ ಒಪ್ಪಂದಗಳಿಗೆ ಸಹಿಹಾಕಲಾಗುತ್ತದೆ. ರವಿವಾರ ಮಧ್ಯಾಹ್ನ ಮೋದಿ ಭಾರತಕ್ಕೆ ಪ್ರಯಾಣ ಬೆಳೆಸಲಿದ್ದಾರೆ.