×
Ad

ಸಿಖ್ ಸೇನಾಧಿಕಾರಿಗೆ ಧಾರ್ಮಿಕ ಹಕ್ಕು ನೀಡಿದ ಅಮೆರಿಕ ಸೇನೆ

Update: 2016-04-02 16:58 IST

 ವಾಶಿಂಗ್ಟನ್, ಎ. 2: ಕರ್ತವ್ಯದಲ್ಲಿರುವಾಗ ಧಾರ್ಮಿಕ ಗಡ್ಡ ಮತ್ತು ಪೇಟ ಧರಿಸಲು ಅಮೆರಿಕದ ಸೇನೆಯಲ್ಲಿ ಅಧಿಕಾರಿಯಾಗಿರುವ ಭಾರತ-ಅಮೆರಿಕನ್ ಸಿಖ್ ವ್ಯಕ್ತಿಯೊಬ್ಬರಿಗೆ ಅನುಮತಿ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಖಾಯಂ ಆಗಿ ತನ್ನ ಧರ್ಮದ ಸಂಕೇತಗಳನ್ನು ಬಳಸಲು ಕ್ಯಾಪ್ಟನ್ ಸಿಮ್ರಾತ್‌ಪಾಲ್ ಸಿಂಗ್‌ಗೆ ಅಮೆರಿಕ ಸೇನೆ ಅವಕಾಶ ನೀಡಿದೆ. ಕರ್ತವ್ಯದಲ್ಲಿರುವಾಗ ಗಡ್ಡ ಮತ್ತು ಪೇಟ ಧರಿಸಲು ಅನುಮತಿ ಪಡೆದ ದಶಕಗಳಲ್ಲೇ ಮೊದಲ ಅಮೆರಿಕನ್ ಸೇನಾಧಿಕಾರಿ ಅವರಾಗಿದ್ದಾರೆ.

 ಸೇನೆಯ ಈ ನಿರ್ಧಾರವು ಅಮೆರಿಕದ ಸೇನೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ತಮ್ಮ ಧಾರ್ಮಿಕ ಹಕ್ಕುಗಳಿಗಾಗಿ ನಡೆಸುತ್ತಿರುವ ಸುದೀರ್ಘ ಹೋರಾಟಕ್ಕೆ ಮಂಗಳ ಹಾಡಿದೆ.

 ‘‘ನನ್ನ ಎರಡು ಜಗತ್ತುಗಳು ಮತ್ತೆ ಒಂದಾಗಿವೆ. ಈಗ ನಾನು ಬಯಸಿದ ರೀತಿಯಲ್ಲೇ ಪೂರ್ಣ ಪ್ರಮಾಣದಲ್ಲಿ ದೇಶಕ್ಕೆ ಸೇವೆ ಸಲ್ಲಿಸಬಹುದಾಗಿದೆ ಹಾಗೂ ಜೊತೆಗೆ, ನಾನು ಬಯಸಿದ ರೀತಿಯಲ್ಲೇ ಪೂರ್ಣ ಪ್ರಮಾಣದಲ್ಲಿ ಸಿಖ್ ಆಗಿ ಉಳಿಯಬಹುದಾಗಿದೆ’’ ಎಂದು 28 ವರ್ಷದ ಸಿಂಗ್ ಹೇಳಿದ್ದಾರೆ.

ಸಿಂಗ್ 2006ರಲ್ಲಿ ವೆಸ್ಟ್ ಪಾಯಿಂಟ್ ಮಿಲಿಟರಿ ಅಕಾಡೆಮಿಗೆ ಸೇರಿದ್ದಾಗ ತನ್ನ ತಲೆಗೂದಲನ್ನು ಕತ್ತರಿಸಿ ಗಡ್ಡವನ್ನು ಬೋಳಿಸಬೇಕಾಗಿತ್ತು.

‘‘ಅದು ತುಂಬಾ ನೋವಿನ ಕೆಲಸವಾಗಿತ್ತು. 18 ವರ್ಷಗಳ ಕಾಲ ನಮ್ಮ ಬಗ್ಗೆ ಒಂದು ನಿರ್ದಿಷ್ಟ ಕಲ್ಪನೆಯನ್ನು ಹೊಂದಿರುತ್ತೇವೆ. ಆ ಕಲ್ಪನೆಯು 10 ನಿಮಿಷಗಳಲ್ಲೇ ಒಮ್ಮೆಲೆ ಕುಸಿದುಹೋಗಿತ್ತು’’ ಎಂದು ಸಿಂಗ್ ಹೇಳಿರುವುದಾಗಿ ಎನ್‌ವೈಡೇಲಿನ್ಯೂಸ್.ಕಾಮ್ ವರದಿ ಮಾಡಿದೆ.

 ಸೇನೆಗೆ ಸೇರಿ 10 ವರ್ಷಗಳಾದ ಬಳಿಕ, ತನಗೆ ಗಡ್ಡ ಮತ್ತು ಪೇಟ ಧರಿಸಲು ಅವಕಾಶ ನೀಡಬೇಕು ಎಂದು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸಿಂಗ್ ಸೇನೆಗೆ ಮನವಿ ಮಾಡಿದ್ದರು. ಈಗ ಅವರು ಸೇನಾ ರೇಂಜರ್ ಮತ್ತು ಕಂಚಿನ ಪದಕ ವಿಜೇತರಾಗಿದ್ದರು. ನ್ಯಾಯಾಲಯಕ್ಕೆ ತಾರತಮ್ಯ ದೂರು ಸಲ್ಲಿಸಬಹುದೆಂದು ಭಾವಿಸಿದ ಸೇನೆ ಡಿಸೆಂಬರ್‌ನಲ್ಲಿ ತಾತ್ಕಾಲಿಕ ಅನುಮತಿ ನೀಡಿತು. ಬಳಿಕ ಸಿಂಗ್ ನ್ಯಾಯಾಲಯಕ್ಕೆ ತಾರತಮ್ಯ ದೂರು ಸಲ್ಲಿಸಿದರು. ಅವರ ಮನವಿಯ ಬಗ್ಗೆ ಮಾರ್ಚ್ 31ರೊಳಗೆ ತೀರ್ಮಾನ ತೆಗೆದುಕೊಳ್ಳುವಂತೆ ನ್ಯಾಯಾಲಯ ಸೇನೆಗೆ ಸೂಚಿಸಿತು.

ಗುರುವಾರ ನ್ಯಾಯಾಲಯದ ತೀರ್ಪೊಂದು ಸಿಮ್ರಾತ್‌ಪಾಲ್ ಸಿಂಗ್‌ಗೆ ಖಾಯಂ ಧಾರ್ಮಿಕ ಸ್ವಾತಂತ್ರವನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News