×
Ad

ಗುಜರಾತ್‌ಗೆ ಮರಳಲು ವಂಝಾರಾಗೆ ವಿಶೇಷ ಸಿಬಿಐ ನ್ಯಾಯಾಲಯದ ಅನುಮತಿ

Update: 2016-04-02 19:30 IST

ಅಹ್ಮದಾಬಾದ್,ಎ.2: ಇಷ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಿವೃತ್ತ ಐಪಿಎಸ್ ಅಧಿಕಾರಿ ಡಿ.ಜಿ.ವಂಝಾರಾ ಅವರ ಜಾಮೀನು ಷರತ್ತುಗಳನ್ನು ಶನಿವಾರ ಸಡಲಿಸಿದ ಇಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯವು ಅವರಿಗೆ ಗುಜರಾತನ್ನು ಪ್ರವೇಶಿಸಲು ಮತ್ತು ಅಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿತು. ಆದರೆ ಪ್ರತಿ ಶನಿವಾರ ನ್ಯಾಯಾಲಯದಲ್ಲಿ ಹಾಜರಾಗಬೇಕು ಎಂಬ ಷರತ್ತನ್ನು ಅದು ವಿಧಿಸಿದೆ.

ಇಷ್ರತ್ ಮತ್ತು ಇತರ ಮೂವರ ಎನ್‌ಕೌಂಟರ್ ಪ್ರಕರಣದಲ್ಲಿ ಕಳೆದ ವರ್ಷದ ಫೆಬ್ರುವರಿಯಲ್ಲಿ ವಂಝಾರಾಗೆ ಜಾಮೀನು ನೀಡಿದ್ದ ನ್ಯಾಯಾಲಯವು ಗುಜರಾತ್‌ನ್ನು ಪ್ರವೇಶಿಸದಂತೆ ಷರತ್ತು ವಿಧಿಸಿತ್ತು. ಅಲ್ಲದೆ ಅವರು ದೇಶದಿಂದ ಹೊರಗೆ ತೆರಳುವುದನ್ನೂ ನಿಷೇಧಿಸಲಾಗಿತ್ತು.

ಲಷ್ಕರೆ ಉಗ್ರ ಡೇವಿಡ್ ಹೆಡ್ಲಿ ಕಳೆದ ತಿಂಗಳು ಮುಂಬೈ ನ್ಯಾಯಾಲಯದ ಎದುರು ನೀಡಿದ್ದ ಹೇಳಿಕೆಯಲ್ಲಿ ಇಷ್ರತ್ ಜಹಾನ್ ಲಷ್ಕರ್-ಎ-ತಯ್ಯಿಬಾದ ಭಯೋತ್ಪಾದಕಿಯಾಗಿದ್ದಳು ಎಂದು ತಿಳಿಸಿದ ಬಳಿಕ ವಂಝಾರಾ ತನ್ನ ಜಾಮೀನು ಪರಿಷ್ಕರಣೆಯನ್ನು ಕೋರಿ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು.

2004,ಜೂ.15ರಂದು ಅಹ್ಮದಾಬಾದ್‌ನ ಹೊರವಲಯದಲ್ಲಿ ಇಷ್ರತ್ ಮತ್ತು ಇತರ ಮೂವರು ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಾಗ ವಂಝಾರಾ ಸಿಸಿಬಿ ಡಿಸಿಪಿಯಾಗಿದ್ದರು.

ಸೊಹ್ರಾಬುದ್ದೀನ್ ಶೇಖ್ ಮತ್ತು ತುಳಸಿ ಪ್ರಜಾಪತಿ ನಕಲಿ ಎನ್‌ಕೌಂಟರ್ ಪ್ರಕರಣಗಳಲ್ಲಿಯೂ ಅವರು ಆರೋಪಿಯಾಗಿದ್ದಾರೆ.

2007,ಎ.24ರಂದು ಅವರನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News