ಪ್ರಧಾನಿಯಿಂದ ಪರಮಾಣು ಭದ್ರತಾ ಉಪಕ್ರಮಗಳ ಪ್ರಕಟನೆ
ವಾಷಿಂಗ್ಟನ್,ಎ.2: ಪರಮಾಣು ಕಳ್ಳ ಸಾಗಾಣಿಕೆ ಮತ್ತು ಪರಮಾಣು ಭೀತಿವಾದವನ್ನು ತಡೆಯಲು ತಂತ್ರಜ್ಞಾನ ನಿಯೋಜನೆ ಸೇರಿದಂತೆ ಪರಮಾಣು ಭದ್ರತೆ ಮತ್ತು ಪ್ರಸರಣ ತಡೆ ಕ್ಷೇತ್ರದಲ್ಲಿ ತನ್ನ ಸರಕಾರವು ಕೈಗೊಂಡಿರುವ ಪ್ರಮುಖ ಉಪಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಪ್ರಕಟಿಸಿದ್ದಾರೆ.
50ಕ್ಕೂ ಅಧಿಕ ರಾಷ್ಟ್ರಗಳ ನಾಯಕರು ಪಾಲ್ಗೊಂಡಿದ್ದ ಪರಮಾಣು ಭದ್ರತಾ ಶೃಂಗಸಭೆಯ ಎರಡನೇ ಮತ್ತು ಅಂತಿಮ ದಿನ ಮೋದಿಯವರು ಈ ಉಪಕ್ರಮಗಳನ್ನು ಪ್ರಕಟಿಸಿದರು.
ತನ್ನ ಸರಕಾರವು ಕೈಗೊಂಡಿರುವ ಉಪಕ್ರಮಗಳನ್ನು ವಿಶ್ವನಾಯಕರಿಗೆ ವಿವರಿಸಿದ ಮೋದಿ ಅವರು,ದೃಢವಾದ ಸಾಂಸ್ಥಿಕ ವ್ಯವಸ್ಥೆ, ಸ್ವತಂತ್ರ ನಿಯಂತ್ರಣ ಏಜನ್ಸಿ ಮತ್ತು ವಿಶೇಷ ತಜ್ಞರ ಮೂಲಕ ಪರಮಾಣು ಭದ್ರತೆಗೆ ಉನ್ನತ ರಾಷ್ಟ್ರೀಯ ಆದ್ಯತೆಯನ್ನು ತನ್ನ ಸರಕಾರವು ಮುಂದುವರಿಸಲಿದೆ ಎಂದು ತಿಳಿಸಿದರು.
ಭಾರತವು ಪರಮಾಣು ಕಳ್ಳ ಸಾಗಾಣಿಕೆಯನ್ನು ನಿಗ್ರಹಿಸಲಿದೆ ಹಾಗೂ ಪರಮಾಣು ಮತ್ತು ವಿಕಿರಣಶೀಲ ವಸ್ತುಗಳ ಪತ್ತೆಗಾಗಿ ರಾಷ್ಟ್ರೀಯ ವ್ಯವಸ್ಥೆಯನ್ನು ಬಲಗೊಳಿಸಲಿದೆ ಎಂದರು.
ಪರಮಾಣು ಭದ್ರತಾ ನಿಧಿಗೆ ಇನ್ನೂ ಹತ್ತು ಲಕ್ಷ ಡಾ.ವಂತಿಗೆಯನ್ನು ನೀಡುವ ಮೂಲಕ ಪರಮಾಣು ಭದ್ರತೆ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ(ಐಎಇಎ)ಯ ಪ್ರಧಾನ ಪಾತ್ರವನ್ನು ಭಾರತವು ಬೆಂಬಲಿಸಲಿದೆ. ಇಂಟರ್‌ನ್ಯಾಷನಲ್ ಫಿಸಿಕಲ್ ಪ್ರೊಟೆಕ್ಷನ್ ಅಸೆಸ್‌ಮೆಂಟ್ ಸರ್ವೀಸ್(ಐಪಿಪಿಎಎಸ್) ಕುರಿತು ಕಾರ್ಯಾಗಾರವೊಂದು ಸಹ ಐಎಇಎ ಸಹಭಾಗಿತ್ವದಲ್ಲಿ ಭಾರತದಲ್ಲಿ ನಡೆಯಲಿದೆ.