ಮಾತುಗಳಲ್ಲಿ ಅಧ್ಯಕ್ಷೀಯ ಘನತೆಯಿರಲಿ : ಟ್ರಂಪ್‌ಗೆ ಒಬಾಮ ಕಿವಿಮಾತು
ವಾಶಿಂಗ್ಟನ್, ಎ. 2: ನಿಮ್ಮ ಮಾತುಗಳಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯ ಘನತೆ ಇರಲಿ ಎಂಬುದಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಕರೆ ನೀಡಿದ್ದಾರೆ.
ಯುರೋಪ್‌ನಲ್ಲಿ ಪರಮಾಣು ಅಸ್ತ್ರಗಳನ್ನು ಬಳಸಲು ತಾನು ಹಿಂಜರಿಯುವುದಿಲ್ಲ ಹಾಗೂ ಜಪಾನ್ ಮತ್ತು ದಕ್ಷಿಣ ಕೊರಿಯಗಳ ಭದ್ರತೆಗಾಗಿ ಅಮೆರಿಕ ಮಾಡುತ್ತಿರುವ ಖರ್ಚನ್ನು ಕಡಿಮೆ ಮಾಡುವುದಕ್ಕಾಗಿ ಈ ದೇಶಗಳಿಗೆ ಪರಮಾಣು ಶಸ್ತ್ರಗಳ ಅಗತ್ಯವಿದೆ ಎಂಬ ಹೇಳಿಕೆಯನ್ನು ಇತ್ತೀಚೆಗೆ ಟ್ರಂಪ್ ನೀಡಿರುವುದನ್ನು ಸ್ಮರಿಸಬಹುದಾಗಿದೆ.
‘‘ಈ ಹೇಳಿಕೆಗಳನ್ನು ನೀಡಿದ ವ್ಯಕ್ತಿಗೆ ವಿದೇಶ ನೀತಿಯ ಬಗ್ಗೆ ಅಥವಾ ಪರಮಾಣು ನೀತಿಯ ಬಗ್ಗೆ ಅಥವಾ ಕೊರಿಯ ಪರ್ಯಯ ದ್ವೀಪದ ಬಗ್ಗೆ ಅಥವಾ ಒಟ್ಟಾರೆಯಾಗಿ ಜಗತ್ತಿನ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ’’ ಎಂದು ಇಲ್ಲಿ ನಡೆದ ಪರಮಾಣು ಭದ್ರತಾ ಶೃಂಗಸಮ್ಮೇಳನದ ಕೊನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಒಬಾಮ ಹೇಳಿದರು.
‘‘ಅಮೆರಿಕದ ಚುನಾವಣೆಯನ್ನು ಜನರು ಗಮನಿಸುತ್ತಾರೆ ಎಂದು ನಾನು ಹಿಂದೆಯೇ ಹೇಳಿದ್ದೇನೆ. ನಾವು ಇಲ್ಲಿ ಏನು ಮಾಡುತ್ತೇವೆಯೋ ಅದು ಜಗತ್ತಿನ ಇತರ ಭಾಗಕ್ಕೆ ಮಹತ್ವದ ಸಂಗತಿಯಾಗಿರುತ್ತದೆ’’ ಎಂದರು.
ರಿಪಬ್ಲಿಕನ್ ಪಕ್ಷದಲ್ಲೇ ಅಸಹನೆ
ಈ ಮಧ್ಯೆ, ರಿಪಬ್ಲಿಕನ್ ಪಕ್ಷದ ನಾಯಕತ್ವದಲ್ಲೇ ಟ್ರಂಪ್ ಹೇಳಿಕೆಗಳ ಬಗ್ಗೆ ಅಸಹನೆ ಬೆಳೆಯುತ್ತಿದೆ ಎನ್ನಲಾಗಿದೆ.
‘‘ಅವರು ಹೀಗೆಯೇ ಎಡವಟ್ಟುಗಳನ್ನು ಮಾಡುತ್ತಾ ಹೋದರೆ, ಅವರು ಎಲ್ಲವನ್ನೂ ಅಪಾಯಕ್ಕೆ ಒಡ್ಡುತ್ತಾರೆ’’ ಎಂದು ಟ್ರಂಪ್‌ರನ್ನು ತಳಮಟ್ಟದ ಕಾರ್ಯಕರ್ತರಿಗೆ ಪರಿಚಯಿಸಲು ಸಹಾಯ ಮಾಡಿದ್ದ ‘ಸಿಟಿಝನ್ಸ್ ಯುನೈಟೆಡ್’ನ ಅಧ್ಯಕ್ಷ ಡೇವಿಡ್ ಬಾಸೀ ಹೇಳುತ್ತಾರೆ.