ಕೆನಡದಲ್ಲಿ ಭಾರತೀಯ ಸಿಖ್ಖ್ ಮೇಲೆ ಹಲ್ಲೆ : ಜನಾಂಗೀಯ ದ್ವೇಷದ ಕೃತ್ಯ
ಟೊರಾಂಟೊ, ಎ.3: ಕೆನಡಾದಲ್ಲಿ ಶನಿವಾರ ನಡೆದ ಜನಾಂಗೀಯ ದ್ವೇಷದ ದಾಳಿಯೊಂದರಲ್ಲಿ ನಾಲ್ವರು ದುಷ್ಕರ್ಮಿಗಳುಭಾರತೀಯ ಮೂಲದ ಸಿಖ್ಖನೊಬ್ಬನ ಮೇಲೆ ಹಲ್ಲೆ ನಡೆಸಿದ್ದಾರೆ. ಭಾರತೀಯ ಪೌರತ್ವ ಹೊಂದಿರುವ ಸುಪೀಂದರ್ ಸಿಂಗ್‌ರನ್ನು ಪಾನಮತ್ತ ನಾಲ್ವರು ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೆ, ಹಿಗ್ಗಾಮಗ್ಗಾ ಥಳಿಸಿದರೆಂದು ಪೊಲೀಸರು ತಿಳಿಸಿದ್ದಾರೆ. ಮೂಲತಃ ಪಂಜಾಬ್‌ನ ಪಾಟಿಯಾಲದವರಾದ ಸುಪೀಂದರ್ ಸಿಂಗ್ ಟೊರಾಂಟೊದ ಉಪನಗರದ ಬ್ರಾಂಪ್ಟನ್‌ನ ನಿವಾಸಿಯಾಗಿದ್ದಾರೆ. ಇದೊಂದು ಜನಾಂಗೀಯ ದ್ವೇಷದ ಹಲ್ಲೆಯಾಗಿದ್ದು,ಸುಪೀಂದರ್ ಅವರ ಕಂದುಬಣ್ಣ ಹಾಗೂ ಪೇಟಾದ ಕಾರಣದಿಂದಾಗಿ ದುಷ್ಕರ್ಮಿಗಳು ಅವರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಕ್ವಿಬೆಕ್ ನಗರದಲ್ಲಿ ಶನಿವಾರ ರಾತ್ರಿ ಸ್ನೇಹಿತರೊಂದಿಗೆ ಟ್ಯಾಕ್ಸಿಗಾಗಿ ಕಾಯುತ್ತಿದ್ದೆ. ಆಗ ಪುರುಷರೇ ಇದ್ದ ಕಾರೊಂದು ತನ್ನ ಸಮೀಪ ಬಂದು ನಿಂತಿತು. ಅದರಲ್ಲಿದ್ದವರು ಫ್ರೆಂಚ್ ಭಾಷೆಯಲ್ಲಿ ನನ್ನನ್ನು ನಿಂದಿಸಿದರಲ್ಲದೆ, ನನ್ನ ಪೇಟಾದತ್ತ ಬೆಟ್ಟು ಮಾಡುತ್ತಿದ್ದರು’’ ಎಂದು ಅವರು ಹೇಳಿದ್ದಾರೆ.
ಈ ಘಟನೆಯ ಬಳಿಕ ಕೆನಡದಲ್ಲಿ ಪೇಟಾ ಧರಿಸುವ ನನ್ನ ಸಮುದಾಯದ ಮಕ್ಕಳ ಸುರಕ್ಷತೆ ಹಾಗೂ ಕ್ಷೇಮದ ಬಗ್ಗೆ ತನಗೆ ಆತಂಕವುಂಟಾಗಿದೆಯೆಂದು ಅವರು ಹೇಳಿದ್ದಾರೆ. ಸುಪೀಂದರ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಪೊಲೀಸರು ದುಷ್ಕರ್ಮಿಗಳ ಪತ್ತೆಕಾರ್ಯದಲ್ಲಿ ತೊಡಗಿದ್ದಾರೆ.
ಸಿಖ್ಖ್ ಯುವಕ ಸುಪೀಂದರ್ ಮೇಲಿನ ಹಲ್ಲೆಯನ್ನು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೆಯ್ ಖಂಡಿಸಿದ್ದಾರೆ. ವಾಶಿಂಗ್ಟನ್‌ನಲ್ಲಿ ಪರಮಾಣು ಭದ್ರತಾ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಾ, ಇಂತಹ ದ್ವೇಷಕೃತ್ಯಗಳಿಗೆ ಕೆನಡಾದಲ್ಲಿ ಸ್ಥಾನವಿಲ್ಲವೆಂದು ಹೇಳಿದ್ದಾರೆ.