ಸೌದಿ ಪಡೆಗಳಿಂದ ಅಲ್‌ಖಾಯಿದ ಶಿಬಿರಗಳ ಮೇಲೆ ದಾಳಿ
ಏಡೆನ್, ಎ.3: ಸೌದಿ ಆರೇಬಿಯದ ಯುದ್ಧ ವಿಮಾನಗಳು ರವಿವಾರ ದಕ್ಷಿಣ ಯಮನ್‌ನಲ್ಲಿರುವ ಅಲ್‌ಖೈದಾ ಶಿಬಿರವೊಂದರ ನಡೆಸಿದ ದಾಳಿಯಲ್ಲಿ, ಹಲವಾರು ಉಗ್ರರು ಗಾಯಗೊಂಡಿರುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಯಮನ್‌ನ ಕರಾವಳಿಯ ಬಂದರು ನಗರ ಮುಕಾಲ್ಲದ ಸಮೀಪದ ಅಲ್‌ಖಾಯಿದಾ ಶಿಬಿರದ ಮೇಲೆ ಸೌದಿ ಸಮರವಿಮಾನಗಳು ನಾಲ್ಕು ವಾಯುದಾಳಿಗಳನ್ನು ನಡೆಸಿರುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಹೌದಿ ಪಡೆಗಳು ಯಮನ್‌ನನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ತಡೆಯಲು ಕಳೆದೊಂದು ವರ್ಷದಿಂದ ಕಾರ್ಯಾಚರಣೆ ನಡೆಸುತ್ತಿರುವ ಸೌದಿ ನೇತೃತ್ವದ ಮೈತ್ರಿಪಡೆಯ ವಿಮಾನಗಳೇ ಅಲ್‌ಖಾಯಿದ ಶಿಬಿರದ ಮೇಲೆ ದಾಳಿ ನಡೆಸಿರುವುದಾಗಿ ಅವರು ಹೇಳಿದ್ದಾರೆ.
ಆದರೆ ಈ ವಿಮಾನವು ಯಾರಿಗೆ ಸೇರಿದ್ದೆಂಬುದನ್ನು ಅಧಿಕೃತವಾಗಿ ದೃಢಪಡಿಸಲಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆಗಾಗಿ ಸೌದಿ ನೇತೃತ್ವದ ಮೈತ್ರಿಪಡೆಯ ವಕ್ತಾರರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲವೆಂದು ಅಧಿಕೃತ ಮೂಲಗಳು ತಿಳಿಸಿವೆ. ಇತ್ತೀಚಿನ ವಾರಗಳಲ್ಲಿ ಅಮೆರಿಕದ ಯುದ್ಧ ವಿಮಾನಗಳು ಕೂಡಾ ಯಮನ್‌ನಲ್ಲಿ ಅಲ್‌ಖಾಯಿದಾ ಉಗ್ರರ ವಿರುದ್ಧ ವಾಯುದಾಳಿಯನ್ನು ನಡೆಸುತ್ತಿವೆ.
ಹೌದಿ ಪಡೆಗಳು ಹಾಗೂ ಸೌದಿ ಬೆಂಬಲಿತ ಯಮನ್ ಅಧ್ಯಕ್ಷ ಅಬ್ದು ರಬ್ಬು ಮನ್ಸೂರ್ ಹದಿಗೆ ನಿಷ್ಠರಾದ ಪಡೆಗಳ ಜೊತೆ ಕಳೆದ ಮಾರ್ಚ್‌ನಿಂದ ಭೀಕರ ಕಾಳಗ ನಡೆಯುತ್ತಿದ್ದು, 6200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.