×
Ad

ಅಝರ್‌ಬೈಜನ್-ಆರ್ಮೇನಿಯ ಸಂಘರ್ಷ, ನಗೊರ್ನೊ-ಕರಬಾಖ್: ಕನಿಷ್ಠ 13 ಸಾವು

Update: 2016-04-05 19:57 IST

ಸ್ಟೆಪನಕರ್ಟ್ (ಅಝರ್‌ಬೈಜನ್), ಎ. 5: ನಗೊರ್ನೊ-ಕರಬಾಖ್ ಭೂಪ್ರದೇಶಕ್ಕೆ ಸಂಬಂಧಿಸಿ ಅಝರ್‌ಬೈಜಾನ್ ಮತ್ತು ಆರ್ಮೆನಿಯ ಸೈನಿಕರ ನಡುವೆ ಸೋಮವಾರ ನಡೆದ ಸಂಘರ್ಷದಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ.

ಸಂಘರ್ಷವನ್ನು ನಿಲ್ಲಿಸುವಂತೆ ರಶ್ಯ ಮತ್ತು ಪಾಶ್ಚಿಮಾತ್ಯ ದೇಶಗಳು ಯುದ್ಧನಿರತ ದೇಶಗಳಿಗೆ ಒತ್ತಡ ಹಾಕುತ್ತಿವೆ. ಆದರೆ, ಆರ್ಮೇನಿಯ ನಿಯಂತ್ರಣದ ಈ ಭೂಪ್ರದೇಶ (ನಗೊರ್ನೊ-ಕರಬಾಖ್) ಒಂದಲ್ಲ ಒಂದು ದಿನ ಅಝರ್‌ಬೈಜಾನ್‌ನ ನಿಯಂತ್ರಣಕ್ಕೆ ಬರುತ್ತದೆ ಎಂದು ಅಝರ್‌ಬೈಜಾನ್‌ನ ಮಿತ್ರದೇಶ ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಹೇಳಿದ್ದಾರೆ.

ಶುಕ್ರವಾರ ರಾತ್ರಿ ಸಂಘರ್ಷ ತಲೆದೋರಿದಂದಿನಿಂದ ಮೃತಪಟ್ಟವರ ಸಂಖ್ಯೆ 46ಕ್ಕೆ ಏರಿದೆ. ಆರ್ಮೇನಿಯದ ಐವರು ‘ಸ್ವಯಂಸೇವಾ’ ಹೋರಾಟಗಾರರು ಪ್ರಯಾಣಿಸುತ್ತಿದ್ದ ಬಸ್ಸೊಂದರ ಮೇಲೆ ದಾಳಿ ನಡೆದಾಗ ಅವರು ಮೃತಪಟ್ಟಿದ್ದಾರೆ ಎಂದು ಆರ್ಮೇನಿಯದ ರಕ್ಷಣಾ ಸಚಿವಾಲಯ ಹೇಳಿದೆ.

ಅದಕ್ಕೂ ಮೊದಲು, ಭೀಕರ ಶೆಲ್ ದಾಳಿಯಲ್ಲಿ ಮೂವರು ನಾಗರಿಕರು ಮತ್ತು ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ ಎಂದು ಕರಬಾಖ್‌ನಲ್ಲಿರುವ ಆರ್ಮೇನಿಯ ಬೆಂಬಲಿತ ಪ್ರತ್ಯೇಕವಾದಿ ಸರಕಾರದ ಅಧಿಕಾರಿಗಳು ಹೇಳಿದರು.

ಸೋಮವಾರ ರಾತ್ರಿ ಆರ್ಮೇನಿಯದ ಪಡೆಗಳು ನಡೆಸಿದ ಮೋರ್ಟರ್ ಮತ್ತು ಗ್ರೆನೇಡ್ ದಾಳಿಗಳಲ್ಲಿ ತನ್ನ ಮೂವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಅಝರ್‌ಬೈಜನ್ ಹೇಳಿದೆ.

ಅಝರ್‌ಬೈಜನ್‌ನ ಭಾಗ ಎಂಬುದಾಗಿ ಅಂತಾರಾಷ್ಟ್ರೀಯವಾಗಿ ಗುರುತಿಸಲಾದ ಕರಬಾಖ್‌ನ ಕೆಲವು ಆಯಕಟ್ಟಿನ ಸ್ಥಳಗಳನ್ನು ತಾನು ವಶಪಡಿಸಿಕೊಂಡಿರುವುದಾಗಿ ಅಝರ್‌ಬೈಜನ್ ಹೇಳಿಕೊಂಡಿದೆ.

ಯಾಕೆ ಸಂಘರ್ಷ?

  ನಗೊರ್ನೊ-ಕರಬಾಖ್ ಪ್ರದೇಶವು ಮೊದಲು ಅಝರ್‌ಬೈಜನ್ ದೇಶಕ್ಕೆ ಸೇರಿತ್ತು. ಇಲ್ಲಿ ಆರ್ಮೇನಿಯ ಜನಾಂಗೀಯರು ವಾಸಿಸುತ್ತಿದ್ದಾರೆ. ಆರ್ಮೇನಿಯದ ಬೆಂಬಲದೊಂದಿಗೆ ನಗೊರ್ನೊ-ಕರಬಾಖ್ ಪ್ರದೇಶದಲ್ಲಿದ್ದ ಆರ್ಮೇನಿಯ ಜನಾಂಗೀಯರು ತಮ್ಮ ಪ್ರದೇಶವನ್ನು ಸ್ವತಂತ್ರ ದೇಶ ಎಂಬುದಾಗಿ ಘೋಷಿಸಿಕೊಂಡರು. ಅಂದಿನಿಂದ ಇಲ್ಲಿ ಸಂಘರ್ಷ ನಡೆಯುತ್ತಾ ಬಂದಿದೆ.

ಅಲ್ಲಿ 1988ರಲ್ಲಿ ಜನಾಂಗೀಯ ಸಂಘರ್ಷ ಆರಂಭವಾಯಿತು. 1990ರ ದಶಕದ ಆರಂಭದಲ್ಲಿ ತಾರಕಕ್ಕೇರಿತು. 1994ರಲ್ಲಿ ಅಧಿಕೃತ ಯುದ್ಧವಿರಾಮ ಏರ್ಪಟ್ಟರೂ, ಸಂಘರ್ಷ ನಿರಂತರವಾಗಿ ಮುಂದುವರಿಯುತ್ತಾ ಬಂದಿದೆ.

ಆರ್ಮೇನಿಯ ಮತ್ತು ಅಝರ್‌ಬೈಜನ್ ಎರಡೂ ದೇಶಗಳು ಮಾಜಿ ಸೋವಿಯತ್ ಒಕ್ಕೂಟದ ದೇಶಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News