×
Ad

ದ.ಆಫ್ರಿಕದ ಪ್ರಪ್ರಥಮ ಶ್ವೇತವರ್ಣೀಯೇತರ ನ್ಯಾಯಾಧೀಶೆ, ನವನೀತಮ್ ಪಿಳ್ಳೆಗೆ ಅತ್ಯುನ್ನತ ಫ್ರೆಂಚ್ ಪುರಸ್ಕಾರ

Update: 2016-04-05 20:18 IST

ಜೊಹಾನ್ಸ್‌ಬರ್ಗ್, ಎ. 5: ದಕ್ಷಿಣ ಆಫ್ರಿಕದ ಪ್ರಪ್ರಥಮ ಶ್ವೇತವರ್ಣೀಯೇತರ ಮಹಿಳಾ ನ್ಯಾಯಾಧೀಶರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಭಾರತೀಯ ಮೂಲದ ನವನೀತಮ್ ಪಿಳ್ಳೆ ಅವರಿಗೆ ಅತ್ಯುನ್ನತ ಫ್ರೆಂಚ್ ನಾಗರಿಕ ಪುರಸ್ಕಾರವನ್ನು ಮಂಗಳವಾರ ಪ್ರಧಾನ ಮಾಡಲಾಗಿದೆ.

  74 ವರ್ಷ ವಯಸ್ಸಿನ ಪಿಳ್ಳೆ, ದಕ್ಷಿಣ ಆಫ್ರಿಕದ ಉಚ್ಛ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಿದ್ದರು. ರ್ವಾಂಡಾದಲ್ಲಿ ನಡೆದ ಲಕ್ಷಾಂತರ ಮಂದಿಯ ನರಮೇಧ ಪ್ರಕರಣದ ವಿಚಾರಣೆ ನಡೆಸಿದ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಧಿಕರಣದ ಅಧ್ಯಕ್ಷೆಯಾಗಿಯೂ ಅವರು ಕರ್ತವ್ಯ ನಿರ್ವಹಿಸಿದ್ದರು.

 ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ ಲಿಜಿಯನ್ ಆಫ್ ಹಾನರ್’ ಪ್ರಶಸ್ತಿ ಲಭಿಸಿರುವುದು ತನಗೆ ದೊರೆತ ಮಹಾಗೌರವವೆಂದು ತಾನು ಭಾವಿಸಿರುವುದಾಗಿ ನವನೀತಮ್ ಪಿಳ್ಳೆ ತಿಳಿಸಿದ್ದಾರೆ.

 ಬಸ್ ಚಾಲಕರೊಬ್ಬರ ಪುತ್ರಿಯಾದ ಪಿಳ್ಳೆ, ದ.ಆಫ್ರಿಕದ ನತಾಲ್ ಪ್ರಾಂತ್ಯದಲ್ಲಿ ಜನಿಸಿದರು. ಬ್ರಿಟನ್‌ನ ಹಾವರ್ಡ್ ವಿವಿಯಲ್ಲಿ ಸ್ನಾತಕೋತ್ತರ ಕಾನೂನು ಪದವಿ ಅಧ್ಯಯನ ಮಾಡಿದ ಅವರು ನ್ಯಾಯಾಂಗ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದರು. ಕಾನೂನು ಪದವಿ ಅಭ್ಯಾಸ ಮಾಡಿದ ಅವರು ನತಾಲ್ ಪ್ರಾಂತ್ಯದಲ್ಲಿ ವಕೀಲಿ ವೃತ್ತಿ ಆರಂಭಿಸಿದ ಮೊದಲ ಬಿಳಿಜನಾಂಗೀಯೇತರ ಮಹಿಳೆಯಾಗಿದ್ದಾರೆ. ಆಕೆ ವಿಶ್ವಸಂಸ್ಥೆಯ ಮಾನವಹಕ್ಕುಗಳಿಗಾಗಿನ ಹೈಕಮೀಶನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

 ಅಂತಾರಾಷ್ಟ್ರೀಯ ನ್ಯಾಯವ್ಯವಸ್ಥೆ, ಮಾನವಹಕ್ಕುಗಳು ಹಾಗೂ ಮಹಿಳಾ ಹಕ್ಕುಗಳಿಗಾಗಿ ಅವರ ಶ್ರಮವನ್ನು ಪರಿಗಣಿಸಿ ನವನೀತಮ್ ಪಿಳ್ಳೆಗೆ ದೊರೆತ ಫ್ರೆಂಚ್ ನಾಗರಿಕ ಪುರಸ್ಕಾರವನ್ನು ನೀಡಲಾಗಿದೆಯೆಂದು ದಕ್ಷಿಣ ಆಫ್ರಿಕದಲ್ಲಿನ ಫ್ರೆಂಚ್ ರಾಯಭಾರಿ ಎಲಿಜಬೆತ್ ಬಾರ್ಬರ್ ತಿಳಿಸಿದ್ದಾರೆ.

ಈ ಮೊದಲು ನೆಲ್ಸನ್ ಮಂಡೇಲಾ, ಅರ್ಚ್‌ಬಿಷಪ್ ಡೆಸ್ಮಂಡ್ ಟುಟು, ಸಾಹಿತಿ ಆ್ಯಂಡ್ರೆ ಬ್ರಿಂಕ್ ಹಾಗೂ ಕಾರ್ಮಿಕ ಚಳವಳಿ ನಾಯಕ ಜಯ್ ನಾಯ್ಡು ಈ ಸರ್ವೋಚ್ಚ ಫ್ರೆಂಚ್ ನಾಗರಿಕ ಪ್ರಶಸ್ತಿ ಸ್ವೀಕರಿಸಿದ್ದರು.

   ನ್ಯಾಯವಾದಿಯಾಗಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಸಂದರ್ಭದಲ್ಲಿ ಪಿಳ್ಳೆ ಅವರು ದ. ಆಫ್ರಿಕದ ವರ್ಣಭೇದ ವಿರೋಧಿ ಚಳವಳಿಗಾರರ ಪರವಾಗಿ ಕಾನೂನು ಹೋರಾಟ ನಡೆಸಿದ್ದರು ಹಾಗೂ ರಾಜಕೀಯ ಕೈದಿಗಳ ಮೇಲೆ ನಡೆಸಲಾದ ದೌರ್ಜನ್ಯ ಹಾಗೂ ಅವರ ದಯನೀಯ ಸ್ಥಿತಿಯ ಬಗ್ಗೆ ವಿಶ್ವದ ಗಮನಸೆಳೆಯಲು ನೆರವಾಗಿದ್ದರು. 1973ರಲ್ಲಿ ದ.ಆಫ್ರಿಕದ ವರ್ಣಭೇದ ಚಳವಳಿಯ ಆಗ್ರಗಣ್ಯ ನಾಯಕ ಹಾಗೂ ಆ ದೇಶದ ಪ್ರಪ್ರಥಮ ಕರಿಯ ಜನಾಂಗೀಯ ಅಧ್ಯಕ್ಷ ನೆಲ್ಸನ್ ಮಂಡೇಲಾ ಸೇರಿದಂತೆ ರಾಬನ್ ದ್ವೀಪದಲ್ಲಿ ಬಂಧನದಲ್ಲಿರಿಸಲಾದ ರಾಜಕೀಯ ಕೈದಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ್ದರು.

     ಪಿಳ್ಳೆ ಪ್ರಸ್ತುತ ಮ್ಯಾಡ್ರಿಡ್‌ನಿಂದ ಕಾರ್ಯಾಚರಿಸುತ್ತಿರುವ ಮರಣದಂಡನೆ ವಿರುದ್ಧದ ಅಂತಾರಾಷ್ಟ್ರೀಯ ಆಯೋಗದ 16ನೆ ಆಯುಕ್ತರಾಗಿದ್ದು, ಮರಣದಂಡನೆ ರದ್ದತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಮತ್ತಿತರ ಸಂಸ್ಥೆಗಳ ಜೊತೆ ಕಾರ್ಯನಿರ್ವಹಿಸುತ್ತಿದ್ದಾರೆ. ದಕ್ಷಿಣ ಆಫ್ರಿಕದಲ್ಲಿ ಮಹಿಳಾ ಹಕ್ಕುಗಳ ಸಂಸ್ಥೆ ‘ಇಕ್ವಾಲಿಟಿ ನೌ’ನ ಸಹಸಂಸ್ಥಾಪಕಿಯೂ ಆಗಿರುವ ಅವರು ಮಹಿಳೆಯರು, ಬಂಧಿತರು, ದೌರ್ಜನ್ಯ ಹಾಗೂ ಕೌಟುಂಬಿಕ ಹಿಂಸಾಚಾರದ ಸಂತ್ರಸ್ತರ ಪರ ವಿವಿಧ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News