ಪನಾಮ ಪೇಪರ್ಸ್ : ಕೊನೆಗೂ ಮೌನ ಮುರಿದ ಅಮಿತಾಭ್
ಮುಂಬೈ , ಎ. 5: ತೆರಿಗೆ ಸ್ವರ್ಗಗಳಲ್ಲಿ ಹಣ ಹೂಡಿರುವ ಗಣ್ಯರ ಕುರಿತ ಪನಾಮ ಪೇಪರ್ಸ್ ಬಗ್ಗೆ ಅಮಿತಾಭ್ ಬಚ್ಚನ್ ಕೊನೆಗೂ ಮೌನ ಮುರಿದಿದ್ದಾರೆ.
" ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಹೇಳಲಾಗಿರುವ ಯಾವುದೇ ಕಂಪೆನಿಗಳು - ಸೀ ಬಲ್ಕ್ ಶಿಪ್ಪಿಂಗ್ ಕಂಪೆನಿ ಲಿ., ಲೇಡಿ ಶಿಪ್ಪಿಂಗ್ ಲಿ. , ಟ್ರೆಶರ್ ಶಿಪ್ಪಿಂಗ್ ಲಿ. ಹಾಗು ಟ್ರಾಮ್ಪ್ ಶಿಪ್ಪಿಂಗ್ ಲಿ. ಬಗ್ಗೆ ನನಗೇನೂ ಗೊತ್ತಿಲ್ಲ. ಈ ಮೇಲಿನ ಯಾವುದೇ ಕಂಪೆನಿಯಲ್ಲಿ ನಾನು ನಿರ್ದೇಶಕನಾಗಿಲ್ಲ. ನನ್ನ ಹೆಸರು ದುರುಪಯೋಗ ಆಗಿರುವ ಸಾಧ್ಯತೆ ಇದೆ. ನಾನು ವಿದೇಶಗಳಲ್ಲಿ ಮಾಡಿರುವ ಖರ್ಚಿನ ಸಹಿತ ಎಲ್ಲ ವೆಚ್ಚಗಳ ಮೇಲಿನ ತೆರಿಗೆಯನ್ನು ಕಟ್ಟಿದ್ದೇನೆ. ನಾನು ವಿದೇಶಗಳಲ್ಲಿ ಇಟ್ಟಿರುವ ಹಣವನ್ನು ಕಾನೂನು ಪ್ರಕಾರವೇ ಇಟ್ಟಿದ್ದೇನೆ ಹಾಗು ಭಾರತದ ತೆರಿಗೆ ಕಟ್ಟಿಯೇ ಇಟ್ಟಿದ್ದೇನೆ. ಇಂಡಿಯನ್ ಎಕ್ಸ್ ಪ್ರೆಸ್ ವರದಿಯಾಲ್ಲೂ ನಾನು ಕಾನೂನು ಬಾಹಿರ ವಹಿವಾಟು ಮಾಡಿದ್ದೇನೆ ಎಂದು ಹೇಳಿಲ್ಲ. ಇದರಿಂದ ವಿಷಯ ಸ್ಪಷ್ಟವಾಗಿದೆ ಎಂದು ಭಾವಿಸುತ್ತೇನೆ " ಎಂದು ಅವರು ಹೇಳಿಕೆ ನೀಡಿದ್ದಾರೆ.