ಐಪಿಎಲ್ ಪಿಚ್‌ಗಳಲ್ಲಿ ಯಥೇಚ್ಛ ನೀರು ಬಳಕೆ: ಮುಂಬೈ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

Update: 2016-04-05 18:09 GMT

ಮುಂಬೈ, ಎ.5: ಮಹಾರಾಷ್ಟ್ಟದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಮೆಂಟ್‌ನ ಪಿಚ್‌ಗಳಿಗೆ ಯಥೇಚ್ಛ ನೀರು ಬಳಕೆಯಾಗುತ್ತಿರುವುದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿಗಳು ಅರ್ಜಿ ಸಲ್ಲಿಕೆಯಾಗಿವೆ.

ಭೀಕರ ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಮಹಾರಾಷ್ಟ್ರದಲ್ಲಿ ನೀರನ್ನು ದುರ್ಬಳಕೆ ಮಾಡುತ್ತಿರುವುದು ‘ಗಂಭೀರ ವಿಷಯ’ ಎಂದು ಹೇಳಿರುವ ಹೈಕೋರ್ಟ್ ಬುಧವಾರ ಅರ್ಜಿ ವಿಚಾರಣೆ ನಡೆಸಲಿದೆ.

ಪಿಚ್‌ಗಳ ನಿರ್ವಹಣೆಗೆ ದಿನಕ್ಕೆ ಸುಮಾರು 60,000 ಲೀಟರ್ ನೀರನ್ನು ಬಳಸುತ್ತಿರುವ ಐಪಿಎಲ್ ಕಮಿಶನರ್‌ಗೆ ತೆರಿಗೆ ಪಾವತಿಸುವಂತೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಮಾಜಿ ಪತ್ರಕರ್ತ ಕೇತನ್ ತಿರೋಡ್ಕರ್ ಅವರು ಹೈಕೋರ್ಟ್‌ಗೆ ಮತ್ತೊಂದು ಪಿಐಎಲ್ ಸಲ್ಲಿಸಿದ್ದಾರೆ.

ಐಪಿಎಲ್ ಪಂದ್ಯಗಳ ಆತಿಥ್ಯವಹಿಸಿರುವ ರಾಜ್ಯದ ಮೂರು ಸ್ಟೇಡಿಯಂಗಳ ಪಿಚ್‌ಗಳನ್ನು ನಿರ್ವಹಿಸಲು ಸುಮಾರು 60 ಲಕ್ಷ ಲೀಟರ್ ನೀರನ್ನು ಬಳಸಲಾಗುತ್ತಿರುವುದನ್ನು ವಿರೋಧಿಸಿ ಎನ್‌ಜಿಒ ಲೋಕಸತ್ತಾ ಮೂವ್‌ಮೆಂಟ್ ಸಲ್ಲಿಸಿದ್ದ ಪಿಐಎಲ್‌ನ್ನು ಜಸ್ಟಿಸ್ ವಿಎಂ ಕಾನಡೆ ನೇತೃತ್ವದ ವಿಭಾಗೀಯ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿದೆ.

ಇದೊಂದು ಗಂಭೀರ ವಿಷಯ. ಇದರ ಬಗ್ಗೆ ನಾವು ಗಮನ ನೀಡಬೇಕಾದ ಅಗತ್ಯವಿದೆ ಎಂದು ಹೇಳಿರುವ ಹೈಕೋರ್ಟ್ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂ, ವಿದರ್ಭ ಸ್ಟೇಡಿಯಂ, ಮಹಾರಾಷ್ಟ್ರ ಸರಕಾರ ಹಾಗೂ ಮುಂಬೈ ಹಾಗೂ ನಾಗ್ಪುರ ಮಹಾನಗರ ಪಾಲಿಕೆಗೆ ಈ ಬಗ್ಗೆ ಉತ್ತರ ನೀಡುವಂತೆಯೂ ಹೈಕೋರ್ಟ್ ಆದೇಶಿಸಿದೆ.

ರಾಜ್ಯ ಭೀಕರ ಬರ ಪರಿಸ್ಥಿತಿ ಎದುರಿಸುತ್ತಿದ್ದು, ರಾಜ್ಯದ ಅಣೆಕಟ್ಟು ಹಾಗೂ ಸರೋವರಗಳಲ್ಲಿ ನೀರು ಬತ್ತಿ ಹೋಗಿದೆ. ಈಗಾಗಲೇ ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗಿದೆ. ರಾಜ್ಯ ಸರಕಾರ ಕಣ್ಣುಮುಚ್ಚಿ ಕುಳಿತಿದೆ. ಮಹಾರಾಷ್ಟ್ರ ರಾಜ್ಯ ನೀರು ನೀತಿಯ ಪ್ರಕಾರ ಸರಕಾರ ಆದ್ಯತೆಯ ಮೇಲೆ ನೀರನ್ನು ಬಳಸಬೇಕು. ನೀರನ್ನು ಮನರಂಜನೆ ಸಹಿತ ಇತರ ಉದ್ದೇಶಕ್ಕೆ ಬಳಸುವುದು ಆದ್ಯತೆ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ದಿನಕ್ಕೆ 60 ಸಾವಿರ ಲೀಟರ್ ನೀರನ್ನು ಬಳಸುತ್ತಿರುವ ಐಪಿಎಲ್ ಕಮಿಶನರ್‌ಗೆ ತೆರಿಗೆ ವಿಧಿಸಬೇಕು. ತೆರಿಗೆಯ ಹಣವನ್ನು ಬರ ಪೀಡಿತ ಜಿಲ್ಲೆಯ ಜನರಿಗೆ ನೀರು ಸರಬರಾಜಿಗೆ ಬಳಸಬೇಕು ಎಂದು ಹಿರಿಯ ಪತ್ರಕರ್ತ ಕೇತನ್ ತಿರೋಡ್ಕರ್ ಸಲ್ಲಿಸಿರುವ ಪಿಐಎಲ್‌ನಲ್ಲಿ ಆಗ್ರಹಿಸಿದ್ದಾರೆ.

ಐಪಿಎಲ್ ಟೂರ್ನಮೆಂಟ್ ಎ.9 ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಮುಂಬೈ, ಪುಣೆ ಹಾಗೂ ನಾಗ್ಪುರದಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿವೆ. ಟೂರ್ನಿಯ ಫೈನಲ್ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೇ 29 ರಂದು ನಡೆಯುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News