×
Ad

ಇರಾನ್‌ನ ವಿಮಾನ ಕಂಪೆನಿಗೆ ಸೌದಿ ಪ್ರವೇಶ ನಿಷೇಧ

Update: 2016-04-06 21:03 IST

ರಿಯಾದ್, ಎ. 6: ಇರಾನ್‌ನ ಮಹಾನ್ ಏರ್‌ಲೈನ್ಸ್ ಕಂಪೆನಿ ತನ್ನ ವಾಯು ಪ್ರದೇಶ ಮತ್ತು ವಿಮಾನ ನಿಲ್ದಾಣಗಳನ್ನು ಬಳಸುವುದನ್ನು ಸೌದಿ ಅರೇಬಿಯ ನಿಷೇಧಿಸಿದೆ. ನಿಷೇಧ ಸೋಮವಾರದಿಂದ ಜಾರಿಗೆ ಬಂದಿದೆ.
ಮಹಾನ್ ಏರ್‌ಲೈನ್ಸ್ ಕಂಪೆನಿ ಇರಾನ್‌ನ ಸೇನಾ ಘಟಕ ರೆವಲೂಶನರಿ ಗಾರ್ಡ್ಸ್‌ನ ಘಟಕವಾಗಿದೆ.
 ಇರಾನ್‌ನ ವಾಯಯಾನ ಕಂಪೆನಿಗೆ ಈ ಮೊದಲು ನೀಡಲಾಗಿದ್ದ ಪರವಾನಿಗೆಗಳನ್ನು ಸೌದಿ ಅರೇಬಿಯದ ನಾಗರಿಕ ವಾಯುಯಾನ ಪ್ರಾಧಿಕಾರ (ಜಿಎಸಿಎ) ರದ್ದುಪಡಿಸಿದೆ. ಆ ಪ್ರಕಾರ, ಆ ಕಂಪೆನಿಗೆ ಸೇರಿದ ವಿಮಾನಗಳು ಸೌದಿಯ ವಿಮಾನ ನಿಲ್ದಾಣಗಳಲ್ಲಿ ಇಳಿಯುವುದನ್ನು ಅಥವಾ ತನ್ನ ವಾಯು ಪ್ರದೇಶವನ್ನು ದಾಟುವುದನ್ನು ನಿಷೇಧಿಸಿದೆ.
‘‘ಸೌದಿಯ ರಾಷ್ಟ್ರೀಯ ನಿಯಮಗಳು ಹಾಗೂ ಸಂಬಂಧಿತ ಕಾನೂನುಗಳನ್ನು ಇರಾನಿಯನ್ ಮಹಾನ್ ಕಂಪೆನಿ ಹಲವು ಬಾರಿ ಉಲ್ಲಂಘಿಸಿರುವುದನ್ನು ಜಿಎಸಿಎ ಗಮನಿಸಿದೆ. ಹಾಗಾಗಿ, ಇರಾನ್‌ನ ವಾಯು ಯಾನ ಕಂಪೆನಿಗೆ ನೀಡಲಾಗಿದ್ದ ಅನುಮತಿಯನ್ನು ರದ್ದುಪಡಿಸಬೇಕಾಯಿತು’’ ಎಂದು ಹೇಳಿಕೆಯೊಂದರಲ್ಲಿ ಜಿಎಸಿಎ ತಿಳಿಸಿದೆ.
ಇರಾನ್ ರೆವಲೂಶನರಿ ಗಾರ್ಡ್ಸ್‌ನ ವಿದೇಶಿ ಘಟಕ ಕುದ್ಸ್ ಬ್ರಿಗೇಡ್‌ಗೆ ಮಹಾನ್ ಏರ್‌ಲೈನ್ಸ್ ಕಂಪೆನಿ ಸಹಕಾರ ನೀಡುತ್ತಿದೆ ಎಂದು 2011ರ ಅಕ್ಟೋಬರ್‌ನಲ್ಲಿ ಅಮೆರಿಕದ ಖಜಾನೆ ಇಲಾಖೆ ಘೋಷಿಸಿತ್ತು.
ಅಸಾದ್ ಸರಕಾರಕ್ಕೆ ಇರಾನ್ ಪೂರೈಸುತ್ತಿರುವ ಶಸ್ತ್ರಾಸ್ತ್ರಗಳನ್ನು ಮಹಾನ್ ಏರ್‌ಲೈನ್ಸ್ ಮೂಲಕವೇ ಸಾಗಿಸಲಾಗುತ್ತಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News