×
Ad

ಇನ್ನು ವಾಟ್ಸ್‌ಆ್ಯಪ್ ಸಂದೇಶಗಳು ಸುಭದ್ರ

Update: 2016-04-06 23:37 IST

 ವಾಶಿಂಗ್ಟನ್, ಎ. 6: ವಾಟ್ಸ್‌ಆ್ಯಪ್ ಜಗತ್ತಿನ ಅತ್ಯಂತ ಜನಪ್ರಿಯ ಸಂದೇಶವಾಹಕ ಆ್ಯಪ್. ಇದರ ಬಳಕೆದಾರರ ಸಂಖ್ಯೆ 100 ಕೋಟಿಗೂ ಅಧಿಕ. ತನ್ನ ಬಳಕೆದಾರರ ಸಂದೇಶಗಳ ಗೌಪ್ಯತೆಯನ್ನು ಕಾಪಾಡುವಲ್ಲಿ ಈಗ ಅದು ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ಅಂದರೆ, ಅದರ ಮೂಲಕ ಕಳುಹಿಸಲಾಗುವ ಸಂದೇಶಗಳು ಇನ್ನು ಸುಭದ್ರ (ಎನ್‌ಕ್ರಿಪ್ಟ್)ವಾಗಿರುತ್ತವೆ. ಆ್ಯಂಡ್ರಾಯ್ಡಾ, ಐಫೋನ್, ಬ್ಲಾಕ್‌ಬೆರಿ ಸೇರಿದಂತೆ ಎಲ್ಲ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿಯೂ ಈ ನೂತನ ಲಕ್ಷಣ ಜಾರಿಯಲ್ಲಿರುತ್ತವೆ.
 ಪತ್ರಕರ್ತರು ಮತ್ತು ಭಿನ್ನಮತೀಯರು ಸೇರಿದಂತೆ ತಮ್ಮ ಸಂದೇಶಗಳ ಭದ್ರತೆ ಮತ್ತು ಖಾಸಗಿತನವನ್ನು ಅಪೇಕ್ಷಿಸುವ ಬಳಕೆದಾರರಿಗೆ ಇದು ಒಳ್ಳೆಯ ಸುದ್ದಿ. ಅದೇ ವೇಳೆ, ಸಂದೇಶಗಳನ್ನು ಸುಭದ್ರ (ಎನ್‌ಕ್ರಿಪ್ಶನ್)ಗೊಳಿಸುವ ಹೆಚ್ಚುತ್ತಿರುವ ಜಾಗತಿಕ ಪ್ರವೃತ್ತಿಯಿಂದ ಅಮೆರಿಕ ಹಾಗೂ ಜಗತ್ತಿನಾದ್ಯಂತದ ಕಾನೂನು ಅನುಷ್ಠಾನ ಸಂಸ್ಥೆಗಳು ಹೆಚ್ಚಿನ ಸವಾಲನ್ನು ಎದುರಿಸುತ್ತಿವೆ. ‘‘ಇದರ ಕಲ್ಪನೆ ಸರಳವಾಗಿದೆ. ನೀವು ಕಳುಹಿಸುವ ಸಂದೇಶವನ್ನು ಓದಲು ಸಾಧ್ಯವಾಗಬೇಕಿರುವುದು ನೀವು ಆ ಸಂದೇಶವನ್ನು ಕಳುಹಿಸಿದ ವ್ಯಕ್ತಿ ಅಥವಾ ಗ್ರೂಪ್‌ನ ಸದಸ್ಯರಿಗೆ. ಬೇರೆ ಯಾರಿಗೂ ಆ ಸಂದೇಶದ ಒಳ ಹೋಗಲು ಸಾಧ್ಯವಾಗುವುದಿಲ್ಲ. ಸೈಬರ್ ಕ್ರಿಮಿನಲ್‌ಗಳಿಗೂ ಸಾಧ್ಯವಾಗುವುದಿಲ್ಲ, ಹ್ಯಾಕರ್‌ಗಳಿಗೂ ಸಾಧ್ಯವಾಗುವುದಿಲ್ಲ, ದೌರ್ಜನ್ಯ ನಡೆಸುವ ಸರಕಾರಗಳಿಗೂ ಸಾಧ್ಯವಾಗುವುದಿಲ್ಲ, ಹೆಚ್ಚೇಕೆ, ನಮಗೂ ಸಾಧ್ಯ ವಾಗುವುದಿಲ್ಲ’’ ಎಂದು ವಾಟ್ಸ್ ಆ್ಯಪ್ ಸಹ ಸಂಸ್ಥಾಪಕರಾದ ಜಾನ್ ಕೌಮ್ ಮತ್ತು ಬ್ರಯಾನ್ ಆ್ಯಕ್ಟನ್ ಮಂಗಳವಾರ ಬ್ಲಾಗ್ ಪೋಸ್ಟ್ ಒಂದರಲ್ಲಿ ಬರೆದಿದ್ದಾರೆ. ಸುಭದ್ರತೆ ಪ್ರಕ್ರಿಯೆಯಲ್ಲಿ, ಸಂದೇಶಗಳು ಸಂಕೇತಗಳಾಗಿ ಮಾರ್ಪಡುತ್ತವೆ. ಕಳುಹಿಸಿದವರು ಮತ್ತು ಸ್ವೀಕರಿಸಿದವರಿಗೆ ಮಾತ್ರ ಈ ಸಂಕೇತಗಳನ್ನು ತರ್ಜುಮೆ ಮಾಡಲು ಸಾಧ್ಯ. ಹಾಗಾಗಿ, ಸಂದೇಶಗಳು ಮತ್ತು ಫೋನ್ ಕರೆಗಳನ್ನು ಕದ್ದು ನೋಡಲು ಅಥವಾ ಕದ್ದಾಲಿಸಲು ಅಮೆರಿಕ ಮತ್ತು ವಿದೇಶಗಳ ಸರಕಾರಗಳಿಗೆ, ಹಾಗೆ ಮಾಡಲು ವಾರಂಟ್ ಇದ್ದರೂ ಅಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News