ಸಮುದ್ರದಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಸೇನಾಧಿಕಾರಿ
Update: 2016-04-07 14:55 IST
ರಾಸ್ ಅಲ್ ಖೈಮಾ, ಎ. 7: ಬೀಚ್ ಗೆ ತೆರಳಿದ್ದ ಅರಬ್ ಮಹಿಳೆಯೋರ್ವಳು ಸಮುದ್ರದಲ್ಲಿ ಮುಳುಗಿ ಹೋಗುತ್ತಿರುವುದನ್ನು ಕಂಡ ಕರ್ತವ್ಯದಲ್ಲಿದ್ದ ಸೇನಾಧಿಕಾರಿ ಮುಹಮ್ಮದ್ ಮಹ್ಮೂದ್ ಅಲ್ ಅಹ್ಮದ್ ಪೊಲೀಸ್ ಸಮವಸ್ತ್ರದೊಂದಿಗೆ ತಕ್ಷಣವೇ ಸಮುದ್ರಕ್ಕೆ ಧುಮುಕಿ ಮಹಿಳೆಯನ್ನು ರಕ್ಷಿಸಿದ ಅತ್ಯಪೂರ್ವ ಘಟನೆ ಇತ್ತೀಚೆಗೆ ನಡೆದಿದೆ.
ಸಮುದ್ರದಲ್ಲಿ ವಿಪರೀತ ಅಲೆಗಳು ಮೇಲೇರುತ್ತಿದ್ದರೂ ಸೇನಾಧಿಕಾರಿ ಮಹಿಳೆಯನ್ನು ಸಮುದ್ರ ತೀರಕ್ಕೆ ತಂದು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು.
ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿ ನಂತರ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಮೇಜರ್ ಜನರಲ್ ಅಲಿ ಅಲ್ವಾನ್ ಅಲ್ ನುಯೈಮಿ, ರಾಸ್ ಅಲ್ ಖೈಮಾದ ಪೊಲೀಸ್ ಮುಖ್ಯ ಕಮಾಂಡರ್ ಅವರು ಪೊಲೀಸ್ ಅಧಿಕಾರಿ ಅಲ್ ಅಹ್ಮದ್ ಅವರ ಸಾಹಸವನ್ನು ಪ್ರಶಂಸಿಸಿ ಅವರ ಧೈರ್ಯ ಹಾಗೂ ಸಾಹಸಮಯ ಜವಾಬ್ದಾರಿಯನ್ನು ಕೊಂಡಾಡಿ ಗೌರವಿಸಿದರು ಎಂದು ತಿಳಿದುಬಂದಿದೆ.