ನಕಲಿ ವಿದ್ಯಾರ್ಥಿ ವೀಸಾ ಜಾಲವನ್ನು ಭೇದಿಸಿದ ಅಮೆರಿಕದ ತನಿಖಾ ಸಂಸ್ಥೆ: 10 ಭಾರತೀಯರ ಸಹಿತ 21 ಮಂದಿ ಸೆರೆ
ವಾಷಿಂಗ್ಟನ್, ಎಪ್ರಿಲ್.7: ನಕಲಿ ವೀಸಾದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಾಗಾಟ ಮಾಡುವ ಬೃಹತ್ ವಂಚಕ ಜಾಲ ಅಮೆರಿಕದಲ್ಲಿ ಸಿಕ್ಕಿಬಿದ್ದಿದ್ದು ಇದರಲ್ಲಿರುವ 21 ಮಂದಿಯಲ್ಲಿ ಹತ್ತು ಮಂದಿ ಭಾರತೀಯರಿದ್ದಾರೆಂದು ವರದಿಯಾಗಿದೆ.ಅಮೆರಿಕದ ಆಂತರಿಕ ಭದ್ರತಾ ವಿಭಾಗ ನಡೆಸಿದ ಗುಪ್ತಕಾರ್ಯಾಚರಣೆಯಲ್ಲಿ ಇವರನ್ನು ಬಂಧಿಸಲಾಗಿದೆ. ನಕಲಿ ಯುನಿವರ್ಸಿಟಿಗಳ ಹೆಸರಲ್ಲಿ ವೀಸಾ ನೀಡಿ ವಿದೇಶಿಗಳನ್ನು ಅಮೆರಿಕದಲ್ಲಿ ಉಳಿಯಲು ನೆರವಾದ ರಿಕ್ರ್ಯೂಟ್ ಮೆಂಟ್ ನಡೆಸಿದವರು, ಮಧ್ಯವರ್ತಿಗಳು, ಕೆಲಸ ನೀಡಿದವರು ನ್ಯೂಯಾರ್ಕ್, ನ್ಯೂಜರ್ಸಿ ವಾಷಿಂಗ್ಟನ್, ವರ್ಜೀನಿಯಾ ನಗರಗಳಲ್ಲಿ ಕಸ್ಟಡಿಗೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ವಿಶ್ವವಿದ್ಯಾನಿಲಯಗಳ ಹೆಸರಿನಲ್ಲಿ ವೀಸಾ ಮಾಡಿಕೊಡುವ ತಂಡ ಕಾರ್ಯಾಚರಿಸುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ನಡೆಸಲಾದ ತನಿಖೆಯ ವೇಳೆ ಆಂತರಿಕ ಭದ್ರತಾ ವಿಭಾಗ ನ್ಯೂಜರ್ಸಿಯಲ್ಲಿ ಯುನಿವರ್ಸಿಟಿ ಇದೆ ಎಂದು ಹೇಳಿತ್ತು. ಈ ವಿಳಾಸದಲ್ಲಿ ಸಂಪರ್ಕಿಸಿ ವೀಸಾ ಮಾಡಿಸಿಕೊಳ್ಳಲು ಪ್ರಯತ್ನಿಸಿದವರು ಸಿಕ್ಕಿಬಿದ್ದಿದ್ದಾರೆ. 1000ದಷ್ಟು ವಿದ್ಯಾರ್ಥಿಗಳನ್ನು ಈ ಯುನಿವರ್ಸಿಟಿಗೆ ರಿಕ್ರ್ಯೂಟ್ ಮಾಡಲಾಗಿತ್ತು.
ವಂಚನೆಗೊಳಗಾದ ಭಾರತೀಯ ವಿದ್ಯಾರ್ಥಿಗಳು ಎಷ್ಟೆಂದು ಬಹಿರಂಗಪಡಿಸಲಾಗಿಲ್ಲ. ಇವರಲ್ಲಿ ಹೆಚ್ಚಿನವರು ಭಾರತೀಯರು ಎನ್ನಲಾಗಿದೆ. ಒಂದುವರ್ಷದಷ್ಟು ಸುದೀರ್ಘಕಾಲ ತನಿಖೆ ನಡೆಸಲಾಗಿತ್ತು. ತಜೇಶ್ ಕೊಡ್ಲಿ, ಜ್ಯೋತಿ ಪಟೇಲ್, ನರೇಂದ್ರ ಸಿಂಗ್ ಫ್ಲಾಹಾ, ಸಂಜಿತ್ ಸುಖಿಜಾ, ಹರ್‌ಪ್ರೀತ್ ಸಚ್‌ದೇವ್, ಅವಿನಾಶ್ ಶಂಕರ್ ಮುಂತಾದವರು ಸೆರೆಸಿಕ್ಕವರಲ್ಲಿ ಸೇರಿದ್ದಾರೆಂದು ವರದಿಗಳು ತಿಳಿಸಿವೆ.