×
Ad

ಚೀನಾದ ಕಂಪೆನಿಗಳಿಗೆ ಭದ್ರತಾ ಅನುಮತಿ ಮರುಪರಿಶೀಲನೆ ಭಾರತಕ್ಕೆ ದುಬಾರಿ: ಚೀನಾ

Update: 2016-04-07 19:58 IST

ಬೀಜಿಂಗ್, ಎ. 7: ಚೀನಾದ ಕಂಪೆನಿಗಳಿಗೆ ಸಂಬಂಧಿಸಿದ ಭದ್ರತಾ ತನಿಖೆಯನ್ನು ಬಿಗಿಗೊಳಿಸುವ ಬಗ್ಗೆ ಭಾರತ ಪರಿಶೀಲನೆ ನಡೆಸುತ್ತಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿರುವ ಚೀನಾದ ಅಧಿಕೃತ ಮಾಧ್ಯಮವು, ಇಂಥ ಕ್ರಮ ಭಾರತಕ್ಕೆ ದುಬಾರಿಯಾಗಿ ಪರಿಣಮಿಸುವುದು ಎಂದು ಇಂದು ಹೇಳಿದೆ.

''ಚೀನಾದ ಕಂಪೆನಿಗಳಿಗೆ ಭದ್ರತಾ ಅನುಮತಿ ನೀಡುವುದನ್ನು ಭಾರತ ನಿರಾಕರಿಸಿದರೆ, ಅದರಿಂದ ಭಾರತ ಪಡೆದುಕೊಳ್ಳುವುದಕ್ಕಿಂತಲೂ ಹೆಚ್ಚಿನದನ್ನು ಕಳೆದುಕೊಳ್ಳಲಿದೆ'' ಎಂದು ಸರಕಾರಿ ಒಡೆತನದ 'ಗ್ಲೋಬಲ್ ಟೈಮ್ಸ್'ನಲ್ಲಿ ಪ್ರಕಟಗೊಂಡ ಲೇಖನವೊಂದು ಅಭಿಪ್ರಾಯಪಟ್ಟಿದೆ.

ಪಠಾಣ್‌ಕೋಟ್ ಭಯೋತ್ಪಾದಕ ದಾಳಿಯ ಸೂತ್ರಧಾರಿ ಪಾಕಿಸ್ತಾನದ ಮಸೂದ್ ಅಝರ್‌ನನ್ನು ಭಯೋತ್ಪಾದಕನೆಂಬುದಾಗಿ ಘೋಷಿಸಬೇಕು ಎಂದು ಕೋರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಮಂಡಿಸಿದ ನಿರ್ಣಯಕ್ಕೆ ಇತ್ತೀಚೆಗೆ ಚೀನಾ ವೀಟೊ ಚಲಾಯಿಸಿರುವುದನ್ನು ಸ್ಮರಿಸಬಹುದಾಗಿದೆ. ಇದಕ್ಕೆ ಪ್ರತಿಯಾಗಿ, ಭಾರತಕ್ಕೆ ಬರುವ ಚೀನಾದ ಕಂಪೆನಿಗಳಿಗೆ ನೀಡಲಾಗಿರುವ ಭದ್ರತಾ ಅನುಮತಿಯನ್ನು ಮರುಪರಿಶೀಲಿಸಬೇಕು ಎನ್ನುವುದು ಭದ್ರತಾ ಇಲಾಖೆಯ ಅಭಿಪ್ರಾಯವಾಗಿದೆ ಎಂಬುದಾಗಿ ಭಾರತದ ಅಧಿಕೃತ ಮೂಲಗಳು ಹೇಳಿದ್ದವು. ಈ ಹಿನ್ನೆಲೆಯಲ್ಲಿ ಚೀನಾದ ಪತ್ರಿಕೆಯಲ್ಲಿ ಈ ಅಭಿಪ್ರಾಯ ಪ್ರಕಟಗೊಂಡಿದೆ.

  ''ಸಂಭಾವ್ಯ ಭದ್ರತಾ ಅನುಮತಿಯ ಮರುಪರಿಶೀಲನೆಯ ಹಿನ್ನೆಲೆಯಲ್ಲಿ, ಭಾರತದಲ್ಲಿನ ತಮ್ಮ ವಿಸ್ತರಣಾ ಯೋಜನೆಗಳ ಬಗ್ಗೆ ಚೀನಾದ ಕಂಪೆನಿಗಳು ಹಿಂದೇಟು ಹಾಕಬಹುದು. ಹಾಗಾಗಿ, ಭಾರತದ ಅಭಿವೃದ್ಧಿಗೆ ತಡೆಯಾಗಬಹುದು. ಯಾಕೆಂದರೆ, ಭಾರತವು ತನ್ನ ಕಳಪೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಚೀನಾವನ್ನು ಅವಲಂಬಿಸಿದೆ'' ಎಂದು ಶಾಂಘೈ ಅಕಾಡೆಮಿ ಆಫ್ ಸೋಶಿಯಲ್ ಸಯನ್ಸಸ್‌ನ ಅಂತಾರಾಷ್ಟ್ರೀಯ ಸಂಬಂಧಗಳ ಸಂಸ್ಥೆಯಲ್ಲಿ ಸಂಶೋಧನಾ ಫೆಲೊ ಆಗಿರುವ ಹು ಝಿಯಾಂಗ್ ಪತ್ರಿಕೆಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News