ಐಪಿಎಲ್ 9: ಉದ್ಘಾಟನಾ ಪಂದ್ಯಕ್ಕೆ ತಡೆ ಹೇರಲು ಹೈಕೋರ್ಟ್ ನಕಾರ
ಮುಂಬೈ, ಎ.7: ವಾಂಖೆಡೆ ಸ್ಟೇಡಿಯಂನಲ್ಲಿ ಎ.9 ರಂದು ಮುಂಬೈ ಇಂಡಿಯನ್ಸ್ ಹಾಗೂ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ನಡುವೆ ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ತಡೆ ನೀಡಲು ಬಾಂಬೆ ಹೈಕೋರ್ಟ್ ಗುರುವಾರ ನಿರಾಕರಿಸಿದೆ.
ಮಹಾರಾಷ್ಟ್ರದ ಮೂರು ನಗರಗಳಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳ ಕ್ರಿಕೆಟ್ ಪಿಚ್‌ಗಳ ನಿರ್ವಹಣೆಗೆ ಸುಮಾರು 60 ಲಕ್ಷ ಲೀಟರ್ ನೀರನ್ನು ಬಳಕೆ ಮಾಡಲಾಗುತ್ತಿರುವ ವಿರುದ್ಧ ಎನ್‌ಜಿಒ ಲೋಕಸತ್ತಾ ಮೂವ್‌ಮೆಂಟ್ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿತ್ತು. ಪಿಐಎಲ್ ವಿಚಾರಣೆಯನ್ನು ಗುರುವಾರ ಮುಂದುವರಿಸಿದ ಜಸ್ಟಿಸ್ ವಿಎಂ ಕಾನಡೆ ಅವರಿದ್ದ ವಿಭಾಗೀಯ ಪೀಠ, ಉದ್ಘಾಟನಾ ಪಂದ್ಯಕ್ಕೆ ತಡೆ ಹೇರಲು ನಿರಾಕರಿಸಿತು.
ಸ್ಟೇಡಿಯಂಗೆ ಯಾವ ಮೂಲಗಳಿಂದ ನೀರು ಪೂರೈಸಲಾಗುತ್ತಿದೆ ಎಂದು ಎ.12ರೊಳಗೆ ತಿಳಿಸುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಿದೆ.
ಹೈಕೋರ್ಟ್‌ನ ಈ ತೀರ್ಪಿನಿಂದಾಗಿ ಐಪಿಎಲ್ ಆಯೋಜಕರು ನಿಟ್ಟುಸಿರು ಬಿಡುವಂತಾಗಿದೆ. ಬುಧವಾರ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ನೀರನ್ನು ಪೋಲು ಮಾಡುತ್ತಿರುವ ಬಿಸಿಸಿಐ, ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ಐಪಿಎಲ್ ಪಂದ್ಯಗಳನ್ನು ನೀರಿನ ಸಮಸ್ಯೆಯಿಲ್ಲದ ಸ್ಥಳಕ್ಕೆ ಸ್ಥಳಾಂತರಿಸುವುದು ಸೂಕ್ತ ಎಂದು ಹೇಳಿತ್ತು