9 ತಿಂಗಳಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಫಿಡೆಲ್ ಕ್ಯಾಸ್ಟ್ರೊ
ಹವಾನ, ಎ. 8: ಕ್ಯೂಬದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೊ ಒಂಬತ್ತು ತಿಂಗಳಲ್ಲಿ ಮೊದಲ ಬಾರಿಗೆ ಗುರುವಾರ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಅವರು ಶಾಲಾ ಮಕ್ಕಳೊಂದಿಗೆ ಹರಟಿದರು ಹಾಗೂ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಇತ್ತೀಚೆಗೆ ತನ್ನ ದೇಶಕ್ಕೆ ನೀಡಿದ ಭೇಟಿಯನ್ನು ಟೀಕಿಸಿದರು.
ಮಕ್ಕಳೊಂದಿಗೆ ಹರಟಿದ 89 ವರ್ಷದ ಕ್ಯಾಸ್ಟ್ರೊ, ತನ್ನ ಜೊತೆಗೆ ಕ್ರಾಂತಿಕಾರಿ ನಾಯಕಿಯಾಗಿದ್ದ ವಿಲ್ಮಾ ಎಸ್ಪಿನ್ ಎಂಬವರ ಬಗ್ಗೆ ಮಕ್ಕಳಿಗೆ ವಿವರಗಳನ್ನು ನೀಡಿದರು. ಈ ದೃಶ್ಯ ಸರಕಾರಿ ಟೆಲಿವಿಶನ್‌ನಲ್ಲಿ ಪ್ರಸಾರವಾಯಿತು.
1959ರ ಕ್ಯೂಬ ಕ್ರಾಂತಿಯ ನಾಯಕ ಕ್ಯಾಸ್ಟ್ರೊ, ಅನಾರೋಗ್ಯದ ಹಿನ್ನೆಲೆಯಲ್ಲಿ 2006ರಲ್ಲಿ ತನ್ನ ಸಹೋದರ ರವುಲ್ ಕ್ಯಾಸ್ಟ್ರೊಗೆ ಅಧಿಕಾರ ಹಸ್ತಾಂತರಿಸಿದ್ದರು.
ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ಲೇಖನದಲ್ಲಿ, ಒಬಾಮರ ಐತಿಹಾಸಿಕ ಕ್ಯೂಬ ಭೇಟಿಯನ್ನು ಕ್ಯಾಸ್ಟ್ರೊ ಟೀಕಿಸಿದ್ದಾರೆ. ಒಬಾಮ ಮಾರ್ಚ್ 20ರಿಂದ 23ರವರೆಗೆ ಕ್ಯೂಬ ಪ್ರವಾಸದಲ್ಲಿದ್ದರು. ಅಮೆರಿಕದ ಹಾಲಿ ಅಧ್ಯಕ್ಷರೊಬ್ಬರು ಕ್ಯೂಬಕ್ಕೆ ಭೇಟಿ ನೀಡಿರುವುದು 80 ವರ್ಷಗಳಲ್ಲೇ ಅದು ಪ್ರಥಮವಾಗಿತ್ತು.