ಭಾರತದೊಂದಿಗೆ ಆಗಸ್ಟ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಒಪ್ಪಂದ ಇಟಲಿ ಕಂಪೆನಿಯ ಮಾಜಿ ಮುಖ್ಯಸ್ಥರಿಗೆ ಜೈಲು

Update: 2016-04-08 14:25 GMT

ಮಿಲಾನ್, ಎ. 8: ಭಾರತಕ್ಕೆ 12 ವಿವಿಐಪಿ ಹೆಲಿಕಾಪ್ಟರ್‌ಗಳನ್ನು ಮಾರಾಟ ಮಾಡಿದ ಇಟಲಿಯ ರಕ್ಷಣಾ ಉಪಕರಣಗಳ ಉತ್ಪಾದಕ ‘ಫಿನ್‌ಮೆಕಾನಿಕ’ದ ಮಾಜಿ ಮುಖ್ಯಸ್ಥ ಗಿಯುಸೆಪ್ ಒರ್ಸಿಗೆ ಇಲ್ಲಿನ ಉಚ್ಚ ನ್ಯಾಯಾಲಯವೊಂದು ಗುರುವಾರ ನಾಲ್ಕೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
4250 ಕೋಟಿ ರೂಪಾಯಿ ವ್ಯವಹಾರದ ಗುತ್ತಿಗೆಯಲ್ಲಿ ನಡೆದ ಭ್ರಷ್ಟಾಚಾರ ಮತ್ತು ತಪ್ಪು ಲೆಕ್ಕಪತ್ರಗಳಿಗಾಗಿ ಈ ಶಿಕ್ಷೆ ವಿಧಿಸಲಾಗಿದೆ.
ಅದೇ ವೇಳೆ, ಫಿನ್‌ಮೆಕಾನಿಕದ ಹೆಲಿಕಾಪ್ಟರ್ ಉಪಸಂಸ್ಥೆ ‘ಆಗಸ್ಟವೆಸ್ಟ್‌ಲ್ಯಾಂಡ್’ನ ಮಾಜಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬ್ರೂನೊ ಸ್ಪಾಗ್ನೊಲಿನಿಗೂ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ 2014ರಲ್ಲಿ ವಿಚಾರಣಾ ನ್ಯಾಯಾಲಯವು ನೀಡಿದ್ದ ತೀರ್ಪನ್ನು ನ್ಯಾಯಾಲಯವು ರದ್ದುಪಡಿಸಿತು.
ಭಾರತಕ್ಕೆ 12 ಹೆಲಿಕಾಪ್ಟರ್‌ಗಳನ್ನು ಮಾರಾಟ ಮಾಡಿದ ವ್ಯವಹಾರದಲ್ಲಿ ಈ ಇಬ್ಬರೂ ಭ್ರಷ್ಟಾಚಾರ ನಡೆಸಿರುವುದು ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿತು ಎಂದು ಇಟಲಿಯ ವಾರ್ತಾ ಸಂಸ್ಥೆ ಎಎನ್‌ಎಸ್‌ಎ ವರದಿ ಮಾಡಿದೆ.
ಈ ಭ್ರಷ್ಟಾಚಾರ ಪ್ರಕರಣವು ಕಂಪೆನಿಯ ಪ್ರತಿಷ್ಠೆಗೆ ಜಾಗತಿಕವಾಗಿ ಹೊಡೆತ ನೀಡಿತ್ತು. ಈ ಘಟನೆಯನ್ನು ಮರೆತು ಮುಂದುವರಿಯುವ ಹಂತದಲ್ಲಿರುವಾಗಲೇ ಹೊರಬಿದ್ದ ನ್ಯಾಯಾಲಯದ ತೀರ್ಪು ಕಂಪೆನಿಗೆ ಭಾರೀ ಆಘಾತವನ್ನೊಡ್ಡಿದೆ.
 ಭಾರತದೊಂದಿಗೆ ಏರ್ಪಟ್ಟ ಸುಮಾರು 4,250 ಕೋಟಿ ರೂ. ಮೊತ್ತದ ಮಾರಾಟ ಒಪ್ಪಂದದಲ್ಲಿ ಲಂಚಗಳ ವಿನಿಮಯವಾಗಿದೆ ಹಾಗೂ ಇದನ್ನು ಮರೆಮಾಚುವುದಕ್ಕಾಗಿ ತಪ್ಪು ಲೆಕ್ಕಪತ್ರಗಳನ್ನು ಸೃಷ್ಟಿಸಲಾಗಿದೆ ಎಂಬ ಆರೋಪವನ್ನು ಒರ್ಸಿ ಮತ್ತು ಸ್ಪಾಗ್ನೊಲಿನಿ ಇಬ್ಬರ ವಿರುದ್ಧವೂ ಹೊರಿಸಲಾಗಿತ್ತು. ಅದೂ ಅಲ್ಲದೆ, ಅಂತಾರಾಷ್ಟ್ರೀಯ ಭ್ರಷ್ಟಾಚಾರ ಆರೋಪಕ್ಕೂ ಅವರನ್ನು ಗುರಿಪಡಿಸಲಾಗಿತ್ತು.
2014ರಲ್ಲಿ ವಿಚಾರಣಾ ನ್ಯಾಯಾಲಯವು ಅವರನ್ನು ಅಂತಾರಾಷ್ಟ್ರೀಯ ಭ್ರಷ್ಟಾಚಾರ ಆರೋಪಗಳಿಂದ ಮುಕ್ತಗೊಳಿಸಿತ್ತು. ಆದರೆ, ತಪ್ಪು ಲೆಕ್ಕಪತ್ರಗಳನ್ನು ಸಿದ್ಧಪಡಿಸಿದ ಪ್ರಕರಣದಲ್ಲಿ ಅವರು ದೋಷಿಗಳೆಂದು ನಿರ್ಧರಿಸಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News