×
Ad

ದಕ್ಷಿಣ ಏಶ್ಯದ ಕಾರ್ಮಿಕರ ಗುಂಪುಗಳು ‘‘ನಡೆದಾಡುವ ಟೈಮ್‌ಬಾಂಬ್‌ಗಳು’’ ಸಿಂಗಾಪುರ ಸಂಸದೆ ಹೇಳಿಕೆ; ಬಳಿಕ ಕ್ಷಮೆ ಕೋರಿದರು

Update: 2016-04-08 19:59 IST

ಸಿಂಗಾಪುರ, ಎ. 8: ದಕ್ಷಿಣ ಏಶ್ಯದ ಕಾರ್ಮಿಕರ ಗುಂಪುಗಳು ‘‘ನಡೆದಾಡುವ ಟೈಮ್‌ಬಾಂಬ್‌ಗಳು’’ ಹಾಗೂ ಅವರನ್ನು ನಗರದ ವಸತಿ ಪ್ರದೇಶಗಳಿಂದ ದೂರವಿಡಬೇಕು ಎಂಬುದಾಗಿ ಹೇಳಿದ್ದ ಸಿಂಗಾಪುರದ ಸಂಸದೆಯೊಬ್ಬರು, ಈಗ ತನ್ನ ಹೇಳಿಕೆಗಾಗಿ ಕ್ಷಮೆ ಯಾಚಿಸಿದ್ದಾರೆ. ಬುಧವಾರ ಸಂಸತ್ತಿನಲ್ಲಿ ಡೆನಿಸ್ ಫುಅ ಮಾಡಿದ ಭಾಷಣಕ್ಕೆ ಆನ್‌ಲೈನ್‌ನಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿದ್ದವು.

2013ರ ಡಿಸೆಂಬರ್‌ನಲ್ಲಿ ಸಿಂಗಾಪುರದಲ್ಲಿ ನಡೆದ ಗಲಭೆ ಮರುಕಳಿಸದಂತೆ ನೋಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಂಸತ್ತಿನಲ್ಲಿ ಮಾತನಾಡಿದ ಅವರು ಹೇಳಿದ್ದರು. ಅಂದು ರಸ್ತೆ ಅಪಘಾತವೊಂದರಲ್ಲಿ ಭಾರತೀಯ ಕಾರ್ಮಿಕನೊಬ್ಬ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ದಕ್ಷಿಣ ಏಶ್ಯದ ನೂರಾರು ಕಾರ್ಮಿಕರು ರಸ್ತೆಯಲ್ಲಿ ದಾಂಧಲೆ ನಡೆಸಿದ್ದರು. 37 ಪೊಲೀಸರು ಸೇರಿದಂತೆ 62 ಮಂದಿ ಗಾಯಗೊಂಡಿದ್ದರು ಹಾಗೂ 23 ವಾಹನಗಳು ಹಾನಿಗೊಂಡಿದ್ದವು.

‘‘ಇಷ್ಟೊಂದು ಸಂಖ್ಯೆಯಲ್ಲಿ ಒಟ್ಟುಸೇರುವ ಜನರು ನಡೆದಾಡುವ ಟೈಮ್ ಬಾಂಬ್‌ಗಳಿದ್ದಂತೆ ಹಾಗೂ ಸಾರ್ವಜನಿಕ ಜನಜೀವನ ಅಸ್ತವ್ಯಸ್ತಗೊಳ್ಳುವ ಘಟನೆಗಳು ಯಾವುದೇ ಸಂದರ್ಭದಲ್ಲಿ ನಡೆಯಬಹುದು’’ ಎಂದು ಅವರು ಹೇಳಿದ್ದರು.

ಅವರ ಹೇಳಿಕೆ ಕೋಪದ ಪ್ರತಿಕ್ರಿಯೆಗಳನ್ನು ಸೃಷ್ಟಿಸಿದೆ. ‘‘ಅವರ ಮನೆ, ಅವರ ತೋಟವನ್ನು ಯಾರು ಸ್ವಚ್ಛಗೊಳಿಸುತ್ತಾರೆ, ಅವರ ಮನೆಯನ್ನು ಯಾರು ಕಟ್ಟಿದ್ದಾರೆ, ಸಿಂಗಾಪುರದವರು ಮಾಡ ಬಯಸದ ಕೊಳಕು ಕೆಲಸಗಳನ್ನು ಯಾರು ಮಾಡುತ್ತಾರೆ ಎನ್ನುವುದನ್ನು ಅವರು ಮರೆತಿದ್ದಾರೆ’’ ಎಂದು ವಲಸಿಗ ಕಾರ್ಮಿಕರ ಏಳಿಗೆಗಾಗಿ ಕೆಲಸ ಮಾಡುತ್ತಿರುವ ಸಂಸ್ಥೆಯೊಂದರ ಫೇಸ್‌ಬುಕ್ ಪುಟದಲ್ಲಿ ಓರ್ವ ವ್ಯಕ್ತಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News