×
Ad

ಸೈನಾ ಸೆಮಿಫೈನಲ್‌ಗೆ, ಸಿಂಧು ಸವಾಲು ಅಂತ್ಯ

Update: 2016-04-08 23:40 IST

ಮಲೇಷ್ಯಾ ಓಪನ್ ಸೂಪರ್ ಬ್ಯಾಡ್ಮಿಂಟನ್ ಟೂರ್ನಮೆಂಟ್

ಮಲೇಷ್ಯಾ, ಎ.8: ಭಾರತದ ಶಟ್ಲರ್ ಸೈನಾ ನೆಹ್ವಾಲ್ ಮಲೇಷ್ಯಾ ಓಪನ್ ಸೂಪರ್ ಸರಣಿ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಆದರೆ, ಇನ್ನೋರ್ವ ಆಟಗಾರ್ತಿ ಪಿ.ವಿ. ಸಿಂಧು ಸೋಲನುಭವಿಸಿದ್ದಾರೆ.

ಶುಕ್ರವಾರ ಇಲ್ಲಿ 58 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.8ನೆ ಆಟಗಾರ್ತಿ ಸೈನಾ ಥಾಯ್ಲೆಂಡ್‌ನ ಪೊರ್ನ್‌ಟಿಪ್ ಬುರಾನಪ್ರಸೆರ್ಟ್‌ಸಕ್ ವಿರುದ್ಧ 19-21, 21-14, 21-14 ಗೇಮ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸೈನಾ ಅವರು ಪೊರ್ನ್‌ಟಿಪ್ ವಿರುದ್ಧ ಆಡಿರುವ 8 ಪಂದ್ಯಗಳ ಪೈಕಿ ಏಳನೆ ಗೆಲುವು ಸಾಧಿಸಿ ಗೆಲುವಿನ ದಾಖಲೆ ಮುಂದುವರಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸಿರುವ ಸೈನಾ ಶನಿವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಚೈನೀಸ್ ತೈಪೆಯ ತೈ ಝು ಯಿಂಗ್‌ರಿಂದ ಕಠಿಣ ಸವಾಲು ಎದುರಿಸಲಿದ್ದಾರೆ. ತೈ ಭಾರತೀಯ ಆಟಗಾರ್ತಿ ಸೈನಾ ವಿರುದ್ಧ ಆಡಿರುವ ಕಳೆದ 5 ಪಂದ್ಯಗಳನ್ನೂ ಜಯಿಸಿದ್ದಾರೆ.

ಇದರಲ್ಲಿ ಕಳೆದ ತಿಂಗಳು ನಡೆದ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಕೂಡ ಸೇರಿದೆ.

ಸಿಂಧು ಸವಾಲು ಅಂತ್ಯ: ಭಾರತದ ಭರವಸೆಯ ಆಟಗಾರ್ತಿ ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಎಡವಿದ್ದಾರೆ. 29 ನಿಮಿಷಗಳ ಪಂದ್ಯದಲ್ಲಿ ಸಿಂಧು ವಿಶ್ವದ ನಂ.4ನೆ ಆಟಗಾರ್ತಿ ರಟ್ಚಾನೊಕ್ ಇಂತನಾನ್ ವಿರುದ್ಧ 7-21, 8-21 ಗೇಮ್ ಗಳ ಅಂತರದಿಂದ ಸೋತಿದ್ದಾರೆ. ಸಿಂಧು ಥಾಯ್ಲೆಂಡ್‌ನ ಆಟಗಾರ್ತಿಯ ವಿರುದ್ಧ ಆಡಿರುವ ಐದನೆ ಪಂದ್ಯದಲ್ಲಿ ನಾಲ್ಕನೆ ಸೋಲು ಕಂಡರು. ಇಂತನಾನ್ ಮುಂದಿನ ಸುತ್ತಿನಲ್ಲಿ ಚೀನಾದ ಆರನೆ ಶ್ರೇಯಾಂಕದ ಆಟಗಾರ್ತಿ ವಾಂಗ್ ಯಿಹಾನ್‌ರನ್ನು ಎದುರಿಸಲಿದ್ದಾರೆ.

ಎರಡು ಪ್ರತ್ಯೇಕ ಸಿಂಗಲ್ಸ್ ಪಂದ್ಯಗಳಲ್ಲಿ ಸೈನಾ ಹಾಗೂ ಸಿಂಧು ಮೊದಲ ಗೇಮ್‌ನಲ್ಲಿ ಸೋತಿದ್ದರು. ಸೈನಾ ಉಳಿದ ಎರಡು ಗೇಮ್‌ಗಳನ್ನು ಜಯಿಸಿ ತಿರುಗೇಟು ನೀಡಲು ಸಮರ್ಥರಾದರು. ಆದರೆ, 20ರ ಹರೆಯದ ಸಿಂಧು ಎದುರಾಳಿ ಆಟಗಾರ್ತಿ ಎದುರು ನಿರುತ್ತರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News