ಮಧುರೈಯಲ್ಲಿ ಸಿಬಿಐ ಅಧಿಕಾರಿಗಳ ಮೇಲೆ ಸಶಸ್ತ್ರ ಗುಂಪಿನಿಂದ ಹಲ್ಲೆ,ಭ್ರಷ್ಟಾಚಾರ ಆರೋಪಿ ಕಸ್ಟಮ್ಸ್ ಅಧೀಕ್ಷಕ ಪರಾರಿ!
ಮಧುರೈ, ಎಪ್ರಿಲ್.9:ತಮಿಳ್ನಾಡಿನ ಮಧುರೈಯಲ್ಲಿ ಭ್ರಷ್ಟಾಚಾರ ಆರೋಪಿ ಕಸ್ಟಮ್ಸ್ ಮತ್ತು ಕೇಂದ್ರೀಯ ಅಬಕಾರಿ ಇಲಾಖೆಯ ಅಧೀಕ್ಷಕರ ತನಿಖೆಗೆ ಆಗಮಿಸಿದ ಸಿಬಿಐಯ ಅಧಿಕಾರಿಗಳಿಗೆ ಶಸ್ತ್ರಧಾರಿ ಗುಂಪೊಂದು ಹಲ್ಲೆ ನಡೆಸಿ ಆರೋಪಿ ಅಧೀಕ್ಷಕರನ್ನು ಬಲವಂತದಿಂದ ಕರೆದೊಯ್ದ ಘಟನೆ ನಿನ್ನೆ ರಾತ್ರೆ ನಡೆದಿದೆ ಎಂದು ವೆಬ್‌ಪೋರ್ಟಲೊಂದು ವರದಿಮಾಡಿದೆ.ನಿನ್ನೆ ರಾತ್ರೆ ಬಿಬಿಕುಲಂನ ಕೇಂದ್ರೀಯ ಕಸ್ಟಮ್ಸ್ ಮತ್ತು ಅಬಕಾರಿ ಶುಲ್ಕ ವಿಭಾಗದ ಆಯುಕ್ತರ ಕಾರ್ಯಾಲಯದಲ್ಲಿ ನಡೆದಿದೆ ಎಂದು ಅದು ತಿಳಿಸಿದೆ.
ಕಾರ್ಯಾಲಯದಲ್ಲಿ ಅಕ್ರಮ ಕೊಡು-ಕೊಳ್ಳುವ ವ್ಯವಹಾರ ನಡೆಯುತ್ತಿದೆಯೆಂದು ಗುಪ್ತಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಪೊಲೀಸ್ ಮಹಾನಿರೀಕ್ಷಕ ಎಸ್ ಮುರುಗನ್ ನೇತೃತ್ವದಲ್ಲಿ ಸಿಬಿಐಯ ವಿಜಿಲೆನ್ಸ್ ತಂಡದ ಅಧೀಕ್ಷಕ ಅಶೋಕ್ ರಾಜ್ ಮತ್ತು ಸಿಬ್ಬಂದಿ ಕೃಷ್ಣನ್‌ರನ್ನು ಬಂಧಿಸಲು ಜಾಲ ಹರಡಿತ್ತು. ಸಿಬಿಐ ಅಧಿಕಾರಿಗಳು ಭ್ರಷ್ಟಾಚಾರ ಪ್ರಕರಣದಲ್ಲಿ ಅಶೋಕ್ ರಾಜ್‌ರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿತ್ತು ಮತ್ತು ಅವರ ಹೇಳಿಕೆಯನ್ನು ಪಡೆಯುತ್ತಿತ್ತು. ಆಗ ಒಂದು ಶಸ್ತ್ರಧಾರಿ ಗುಂಪು ಕಚೇರಿ ಒಳಗೆ ನುಸುಳಿ ಬಂದು ಸಿಬಿಐ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದೆ.
ಆನಂತರ ಆ ಗುಂಪಿನ ದುಷ್ಕರ್ಮಿಗಳು ಕೆಲವು ಮಹತ್ವಪೂರ್ಣ ದಾಖಲೆಗಳನ್ನು ಹಾನಿಮಾಡಿವೆ. ಮತ್ತು ಅಧೀಕ್ಷಕರನ್ನು ತಮ್ಮ ಜೊತೆ ಕರೆದೊಯ್ದಿತು ಎಂದು ವರದಿ ತಿಳಿಸಿದೆ. ಹಲ್ಲೆಯಿಂದಾಗಿ ಮುರುಗನ್ ಮತ್ತುಕಾನ್ಸ್‌ಟೇಬಲ್ ಬಾಲಸುಂದರ್‌ಗೆ ಗಂಭೀರಗಾಯಗಳಾಗಿವೆ ಮತ್ತು ಅವರನ್ನು ಸರಕಾರಿ ರಾಜಾಜಿ ಆಸ್ಪತ್ರೆಗೆ ಸೇರಿಲಾಗಿದೆ. ತನಿಖೆಯಲ್ಲಿ ಅಶೋಕ್ ರಾಜ್ ನಗರದ ಒಬ್ಬ ಪ್ರಮುಖ ಶಾಲೆಯ ನಿರ್ದೇಶಕ ಮಂಡಲಿಯ ಸದಸ್ಯರಾಗಿರುವುದು ತಿಳಿದು ಬಂದಿದೆ. ಕೋಟ್ಯಂತರ ರೂಪಾಯಿಯ ಗ್ರಾನೈಟ್ ಗಣಿಗಾರಿಕೆ ಹಗರಣದಲ್ಲಿ ವ್ಯಸ್ತರಾಗಿರುವ ಗ್ರಾನೈಟ್ ಮಾಫಿಯಾದ ಜೊತೆಗೆ ವ್ಯವಹಾರ ಕುದುರಿಸುತ್ತಿದ್ದರು ಎನ್ನಲಾಗಿದೆ. ಇದರ ಸೂಚನೆ ಸಿಕ್ಕಿದ್ದು ಮುರುಗನ್ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಲು ತನಿಖೆಗಾಗಿ ಕಸ್ಟಂಸ್ ಕಾರ್ಯಾಲಯಕ್ಕೆ ತೆರಳಿದ್ದರು ಎಂದು ವರದಿಯಾಗಿದೆ. ಪೊಲೀಸರು ಪರಾರಿಯಾದ ಅಧಿಕಾರಿ ಮತ್ತು ಹಲ್ಲೆಯಲ್ಲಿ ಭಾಗಿಯಾದ ದುಷ್ಕರ್ಮಿಗಳ ಬಂಧನಕ್ಕೆ ವ್ಯಾಪಕ ತನಿಖೆ ಅಭಿಯಾನವನ್ನೇ ಆರಂಭಿಸಿದ್ದಾರೆಂದು ವರದಿಗಳು ತಿಳಿಸಿವೆ.