×
Ad

‘ಭ್ರಷ್ಟಾಚಾರ’ ಪ್ರಶ್ನೆಯಿಂದ ಮುಜುಗರಕ್ಕೀಡಾದ ಅಮಿತ್ ಶಾ

Update: 2016-04-09 19:04 IST

    ಹೊಸದಿಲ್ಲಿ,ಎ.9: ಅಸ್ಸಾಂನಲ್ಲಿ ವಿಧಾನಸಭಾ ಚುನಾವಣಾ ಪ್ರಚಾರವು ಕಾವೇರಿದ್ದು,ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿಯು ತನ್ನ ಬತ್ತಳಿಕೆಯಲ್ಲಿರುವ ಟೀಕಾಸ್ತ್ರಗಳನ್ನು ಎಡೆಬಿಡದೆ ಪ್ರಯೋಗಿಸುತ್ತಿದೆ. ಆದರೆ ಶನಿವಾರ ಗುವಾಹಟಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಸ್ಸಾಂನ ಮುಖ್ಯಮಂತ್ರಿ ತರುಣ್‌ಗೊಗೊಯ್ ಅವರನ್ನು ಟೀಕಿಸ ಹೊರಟ ಬಿಜೆಪಿ ಅದ್ಯಕ್ಷ ಅಮಿತ್‌ಶಾ ಪತ್ರಕರ್ತರ ಪ್ರಶ್ನೆಯಿಂದ ತಾನೇ ಮುಜುಗರಕ್ಕೀಡಾದ ಘಟನೆ ನಡೆದಿದೆ.

    ಅಸ್ಸಾಂನಲ್ಲಿ ಬಿಜೆಪಿ ಸರಕಾರವು ಅಧಿಕಾರಕ್ಕೇರಿದಲ್ಲಿ, ಹಾಲಿ ಮುಖ್ಯಮಂತ್ರಿ ತರುಣ್‌ಗೊಗೊಯ್ ವಿರುದ್ಧ ಭ್ರಷ್ಟಾಚಾರ ಪ್ರಕರಣದ ಬಗ್ಗೆ ತನಿಖೆ ನಡೆಸಲಿದೆಯೆಂದು ಅಮಿತ್ ಶಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಆಗ ಪತ್ರಕರ್ತರೊಬ್ಬರು, ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿರುವ ಮಾಜಿ ಕಾಂಗ್ರೆಸ್ ಸಚಿವ ಹಿಮಂತ ಬಿಸ್ವಾ ಶರ್ಮಾ ವಿರುದ್ಧದ ಭ್ರಷ್ಟಾಟಾರ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುವುದೇ ಎಂದು ಪ್ರಶ್ನಿಸಿದ್ದರು.

 ಈ ಅನಿರೀಕ್ಷಿತ ಪ್ರಶ್ನೆಯಿಂದ ಶಾ ತೀರಾ ಮುಜುಗರಕ್ಕೊಳಗಾದವರಂತೆ ಕಂಡರು. ಕೆಲವು ಕ್ಷಣ ಸೂಕ್ತ ಉತ್ತರಕ್ಕಾಗಿ ತಡಕಾಡಿದ ಬಳಿಕ ಅವರು, ಪತ್ರಕರ್ತನನ್ನುದ್ದೇಶಿಸಿ ಇಂತಹ ಪ್ರಶ್ನೆಗಳನ್ನು ನೀವು ಕೇಳಬಾರದು ಎಂದು ನಗುತ್ತಾ ಜಾರಿಕೊಂಡರು.

   ಗೋವಾ ಹಾಗೂ ಗುವಾಹಟಿಗಳಲ್ಲಿ ಪ್ರಮುಖ ಜಲಾಭಿವೃದ್ಧಿ ಯೋಜನೆಗಳಲ್ಲಿ ಟೆಂಡರ್‌ಗಳನ್ನು ಪಡೆಯಲು ಅಮೆರಿಕದ ಕಂಪೆನಿಯೊಂದು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿದ ಪ್ರಕರಣದಲ್ಲಿ ಗೊಗೊಯ್ ಸಂಪುಟದಲ್ಲಿ ಹಿರಿಯ ಸಚಿವರಾಗಿದ್ದ ಹಿಮಂತ ಬಿಸ್ವಾ ಶರ್ಮಾ ಅವರ ಹೆಸರು ಕೂಡಾ ಕೇಳಿಬಂದಿತ್ತು. ಗುವಾಹಟಿ ಜಲ ಪೂರೈಕೆ ಯೋಜನೆಗೆ ಸಂಬಂಧಿಸಿ ಟೆಂಡರ್ ನೀಡಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆಯೆನ್ನಲಾಗಿದ್ದು, ಆಗ ಹಿಮಂತ ಬಿಸ್ವಾ ಅವರು ಗುವಾಹಟಿ ಜಲಾಭಿವೃದ್ಧಿ ಇಲಾಖೆಯ ಉಸ್ತುವಾರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News