ಅಮೆರಿಕದ ಮೇಲೆ ಪರಮಾಣು ದಾಳಿ ನಡೆಸಲು ಸಮರ್ಥ: ಕೊರಿಯ
ಸಿಯೋಲ್, ಎ. 9: ತಾನು ನೂತನ ಖಂಡಾಂತರ ಪ್ರಕ್ಷೇಪಕ ರಾಕೆಟ್ ಇಂಜಿನ್‌ನ ಯಶಸ್ವಿ ಪರೀಕ್ಷೆ ನಡೆಸಿದ್ದು, ಇದರಿಂದ ಅಮೆರಿಕದ ಮೇಲೆ ಪರಮಾಣು ದಾಳಿ ನಡೆಸುವ ಸಾಮರ್ಥ್ಯ ತನಗೆ ಲಭಿಸಿದೆ ಎಂದು ಉತ್ತರ ಕೊರಿಯ ಶನಿವಾರ ಹೇಳಿದೆ.
ಉತ್ತರ ಕೊರಿಯದ ಹೇಳಿಕೆ ನಿಜವಾದರೆ, ಇದು ಆ ದೇಶದ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮದಲ್ಲಿ ದೊಡ್ಡ ಮೈಲಿಗಲ್ಲಾಗಲಿದೆ.
ಆದಾಗ್ಯೂ, ಉತ್ತರ ಕೊರಿಯ ಇಷ್ಟರವರೆಗೆ ವಿಶ್ವಾಸಾರ್ಹ ಖಂಡಾಂತರ ಪ್ರಕ್ಷೇಪಕ ಕ್ಷಿಪಣಿಯನ್ನು ಹೊಂದಿಲ್ಲ, ಹಾಗಾಗಿ, ಅದಕ್ಕೆ ಪರಮಾಣು ಸಿಡಿತಲೆಯನ್ನು ಹೊಂದಿಸುವ ಮಾತು ದೂರವೇ ಉಳಿಯಿತು ಎಂದು ದಕ್ಷಿಣ ಕೊರಿಯದ ಅಧಿಕಾರಿಗಳು ಹೇಳಿದ್ದಾರೆ.
ಉತ್ತರ ಕೊರಿಯ ಘೋಷಿಸಿದ ಪರೀಕ್ಷೆ, ಇತ್ತೀಚಿನ ದಿನಗಳಲ್ಲಿ ಅದು ನಡೆಸುತ್ತಿರುವ ಪ್ರಚೋದನೆಗಳ ಸಾಲಿನಲ್ಲಿ ಇತ್ತೀಚಿನದ್ದಾಗಿದೆ ಎಂಬುದಾಗಿ ಅಮೆರಿಕ ಮತ್ತು ಅದರ ಮಿತ್ರ ಪಕ್ಷಗಳು ಭಾವಿಸಿವೆ.
ಅದೇ ವೇಳೆ, ಅಮೆರಿಕದ ಮತ್ತು ದಕ್ಷಿಣ ಕೊರಿಯಗಳ ಮೇಲೆ ಮುನ್ನೆಚ್ಚರಿಕಾ ಪರಮಾಣು ದಾಳಿಗಳನ್ನು ನಡೆಸುವುದಾಗಿಯೂ ಉತ್ತರ ಕೊರಿಯ ಬೆದರಿಕೆ ಹಾಕಿದೆ.