×
Ad

ಏಶ್ಯ ಪೆಸಿಫಿಕ್‌ನಲ್ಲಿ ಭಾರತಕ್ಕೆ ಮಹತ್ವದ ಪಾತ್ರ: ಕಾರ್ಟರ್

Update: 2016-04-09 22:44 IST

ನ್ಯೂಯಾರ್ಕ್, ಎ. 9: ಏಶ್ಯ ಪೆಸಿಫಿಕ್‌ನಲ್ಲಿ ಭಾರತ ಅತ್ಯಂತ ಪ್ರಭಾವಿ ಹಾಗೂ ಶಕ್ತಿಶಾಲಿ ದೇಶವಾಗಿದೆ ಹಾಗೂ ಅದು ಈ ವಲಯದಲ್ಲಿ ವಹಿಸಬೇಕಾದ ಪಾತ್ರ ಹೆಚ್ಚುತ್ತಾ ಹೋಗುತ್ತದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಶ್ಟನ್ ಕಾರ್ಟರ್ ಹೇಳಿದ್ದಾರೆ.
ಭಾರತಕ್ಕೆ ಭೇಟಿ ನೀಡುವ ಒಂದು ದಿನದ ಮೊದಲು ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು ಹೇಳಿದರು.
ಅಧ್ಯಕ್ಷ ಬರಾಕ್ ಒಬಾಮ ಮತ್ತು ಪ್ರಧಾನಿ ನರೇಂದ್ರ ಮೋದಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ತೆಗೆದುಕೊಂಡಿರುವ ಕೆಲವು ಮಹತ್ವದ ನಿರ್ಣಯಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ತನ್ನ ಈ ಭೇಟಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಟರ್ ರವಿವಾರದಿಂದ ಮೂರು ದಿನಗಳ ಕಾಲ ಭಾರತದ ಪ್ರವಾಸದಲ್ಲಿರುತ್ತಾರೆ. ಈ ಅವಧಿಯಲ್ಲಿ ಅವರು ಗೋವ ಮತ್ತು ಹೊಸದಿಲ್ಲಿಗಳಿಗೆ ಭೇಟಿ ನೀಡುತ್ತಾರೆ.
‘‘ರೋಚಕ ನೂತನ ಯೋಜನೆಗಳ ಬಗ್ಗೆ ನಾವು ಮಾತುಕತೆ ನಡೆಸುತ್ತೇವೆ. ಆದರೆ, ಅವುಗಳ ವಿವರಗಳನ್ನು ನಾನೀಗ ನೀಡಲಾರೆ’’ ಎಂದರು. ಒಬಾಮ ಆಡಳಿತದ ‘‘ಏಶ್ಯ ಪೆಸಿಫಿಕ್ ಮರುಸಮತೋಲನ’ ಮತ್ತು ಮೋದಿ ಸರಕಾರದ ‘‘ಆ್ಯಕ್ಟ್ ಈಸ್ಟ್ ಏಶ್ಯ’’ ನೀತಿಗಳು ಜಗತ್ತಿನ ಎರಡು ಬೃಹತ್ ಪ್ರಜಾಸತ್ತೆಗಳ ಬಾಂಧವ್ಯ ವೃದ್ಧಿಗೆ ಪೂರಕವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News