×
Ad

ಕನ್ಹಯ್ಯ ಕುಮಾರನ ಮತ್ತೊಂದು ಭಾಷಣ

Update: 2016-04-10 21:23 IST

ನಾನು ಯಾರಾದರೂ ಚೀಟಿ ಕಳಿಸಬಹುದಾದಷ್ಟು ಹೆಚ್ಚು ಮಾತಾಡೋದಿಲ್ಲ. ಕೆಲವು ಅನ್ನಿಸಿಕೆಗಳನ್ನಷ್ಟೆ ಹಂಚಿಕೊಳ್ತೀನಿ.

ಕೆಲವು ಸಲ ನಾನು ಭಾಷಣ ಮುಗಿಸಿ ಮರಳುವಾಗ ನನ್ನ ಮೇಲೆ ಚಪ್ಪಲಿ/ ಬೂಟ್ ಎಸೆಯಲಾಗ್ತದೆ. ಇಲ್ಲೂ ಯಾರಾದರೂ ಅಂಥ ಇರಾದೆಯಿಂದ ಬಂದಿರಬಹುದು. ಅವರಲ್ಲಿ ನನ್ನ ವಿನಂತಿ, ದಯವಿಟ್ಟು ಎಸೆಯುವಾಗ ಎರಡೂ ಬೂಟುಗಳನ್ನ ಎಸೆಯಿರಿ. ಮತ್ತು, ಜೊತೆಗೊಂದು ಜೋಡಿ ಹೆಚ್ಚುವರಿಯಾಗಿ ತಂದಿರಿ. ಹೊರಗೆ ವಿಪರೀತಿ ಬಿಸಿಲಿದೆ. 
ಆದ್ರೆ ಇಲ್ಯಾರೂ ಫ್ರೀಲ್ಯಾನ್ಸ್ ಗೋಡ್ಸೆ ಇಲ್ಲ ಅಂತ ನನಗೆ ಅನಿಸ್ತಿದೆ.

ಇಲ್ಲಿ ‘ಪ್ರತಿರೋಧ್ – ನಿರ್ಭಯ ಚಿತ್ತದ ಮಾತು’ ಅಂತ ಬರೆಯಲಾಗಿದೆ. ಇಲ್ಲಿ ಪತ್ರಕರ್ತರಿದ್ದೀರಿ. ನಿಮ್ಮ ಹಸ್ತಕ್ಷೇಪ ಮಾಡದೆ ಇಲ್ಲಿಯ ಮಾತುಗಳನ್ನ ಹೊರಗೆ ತಲುಪಿಸುವಿರಾದರೆ ಕೇಳಿ: ನಾವು ಹೆದರುವವರಲ್ಲ. ಆದ್ದರಿಂದ ನಮ್ಮನ್ನು ಹೆದರಿಸೋ ಪ್ರಯತ್ನ ಬಿಟ್ಟುಬಿಡಿ. ನಮ್ಮ ಚಿತ್ತ ನಿರ್ಭೀತವಾಗಿಯೇ ಇದೆ. ಒಬ್ಬ ರೋಹಿತ್ ವೇಮುಲನನ್ನು ನಾವು ಕಳೆದುಕೊಂಡ ನಂತರ, ನಾನು ಜೈಲಿಗೆ ಹೋಗಿಬಂದ ನಂತರ, ದೇಶದ್ರೋಹದ ಆರೋಪ ಹೊತ್ತ ನಂತರ, ಡಜನ್ ಗಟ್ಟಲೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೆರೆವಾಸ ಅನುಭವಿಸಿದ ನಂತರ, ಸಾವಿರಾರು ಜನರ ತಲೆಗೇರಿ ಇಳಿದ ನಂತರ, ಸಾವಿರಾರು ಜನ ಶಾಪ ತಿಂದ ನಂತರ, ನಮ್ಮ ಬುದ್ಧಿ ನೆಟ್ಟಗಾಗಿದೆ. 
ಇಲ್ಲಿ ನಾವೆಷ್ಟು ವಿದ್ಯಾರ್ಥಿಗಳು ಮಾತಾಡಲು ಬರ್ತಿದ್ದೇವೆಯೋ, ಎಲ್ಲರೂ ಮತ್ತೆಮತ್ತೆ ಒಗ್ಗಟ್ಟಿನ ಮಾತನ್ನಾಡುತ್ತಿದ್ದೇವೆ. ಆದ್ದರಿಂದ ಇಲ್ಲಿ ನೆರೆದಿರುವ ಎಲ್ಲ ಬುದ್ಧಿಜೀವಿಗಳಲ್ಲಿ ನಮ್ಮ ವಿನಂತಿಯಿದೆ, ನೀವು ಕೂಡ ಒಗ್ಗೂಡಿ. ನೀವು ಒಟ್ಟಾದರೆ ಈ ದೇಶದಲ್ಲಿ ಭಾರೀ ಬದಲಾವಣೆ ಸಾಧ್ಯ. ಸಾಹಿತಿಗಳು ಸಹಿಷ್ಣುತೆ, ಅಸಹಿಷ್ಣುತೆಯ ಚರ್ಚೆಯನ್ನು ಹುಟ್ಟುಹಾಕಿದರು, ನಾವು ವಿದ್ಯಾರ್ಥಿಗಳು ಹೋರಾಟವನ್ನು ಮುಂದುವರೆಸಿದೆವು. ನೀವು ಕೂಡ ಒಗ್ಗೂಡಿ ಹೋರಾಟವನ್ನು ಮುಂದಕ್ಕೆ ಕರೆದೊಯ್ಯುವುದಾದರೆ, ನಾವೂ ಜೊತೆಯಾಗಲು ತಯಾರಿದ್ದೇವೆ. ಇದು ನಮ್ಮ ಕಮಿಟ್ಮೆಂಟ್.

ಎರಡು ದಿನ ಹಿಂದೆ, ಇವತ್ತು ಏಪ್ರಿಲ್ 8, ಏಪ್ರಿಲ್ 6ರಂದು ಭಾರೀ ಸುದ್ದಿ ಬಿತ್ತರವಾಗ್ತಿತ್ತು. ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷಕ್ಕೆ ಅದೆಷ್ಟೋ ವರ್ಷಗಳಾದವು ಅಂತ. ನಗ್ಗೊತ್ತಿಲ್ಲ, ನನ್ನ ಗಣಿತ ಸ್ವಲ್ಪ ವೀಕ್. 1980ರ ಏಪ್ರಿಲ್ 6ರಂದು ಒಂದು ಪಕ್ಷ ಹುಟ್ಟಿಕೊಂಡಿತು. ಅದೇ ಭಾರತೀಯ ಜನತಾ ಪಕ್ಷ. ನಾನು ಭಾಜಪಾದ ವಿರೋಧಿ ಖಂಡಿತಾ ಅಲ್ಲ ಅಂತ ಮೊದಲೇ ಹೇಳಿಬಿಡ್ತೀನಿ. ಆದ್ದರಿಂದಲೇ ಈ ಸಂದರ್ಭದಲ್ಲಿ ದುಷ್ಯಂತ್ ಕುಮಾರರ ಒಂದು ನಜ್ಮ್ ಅರ್ಪಿಸಲು ಬಯಸ್ತೀನಿ:

ಕೈಸೆ ಕೈಸೆ ಮಂಜರ್ ಆನೇ ಲಗೇ ಹೈ
ಗಾತೇ ಗಾತೇ ಲೋಗ್ ಚಿಲ್ಲಾನೇ ಲಗೇ ಹೈ
ಆಪ್ ತೊ ಇಸ್ ತಾಲಾಬ್ ಕ ಪಾನೀ ಬದಲ್ ದೋ ಯಾರೋ
ಯೆ ಕಮಲ್ ಕೆ ಫೂಲ್ ಘುಮ್ಲಾನೇ ಲಗೇ ಹೈ!
ಈ ಪದ್ಯ ಬರೆದು ಬಹಳ ಕಾಲವಾಯ್ತು. 1980ರಲ್ಲಿ ಬರೆದಿದ್ದು ಇದು.

ಒಬ್ಬ ದೇಶಭಕ್ತ ನನ್ನ ಬಳಿಗೆ ಬಂದ. ನಾನ್ಯಾಕೆ ಅವನನ್ನ ದೇಶಭಕ್ತ ಅಂತಿದ್ದೀನಿ ಅಂದ್ರೆ, ಅವನು ನನ್ನನ್ನು ದೇಶಭಕ್ತ ಅಂತ ಕರೀಲಿಕ್ಕೆ ತಯಾರಿರಲಿಲ್ಲ, ಅದಕ್ಕೆ. ಅವನು ನನಗೆ ಹೇಳಿದ, “ನೋಡು! ಭಾರತೀಯ ಜನತಾ ಪಾರ್ಟಿ ದೇಶದಲ್ಲಿ ಏನೆಲ್ಲ ಒಳ್ಳೊಳ್ಳೆ ಕೆಲಸಗಳನ್ನ ಮಾಡೋಕೆ ಹೊರಟಿದೆ. ನೀವು ನೋಡಿದ್ರೆ ವಿದ್ಯಾರ್ಥಿಗಳು ಓದೋದು ಬಿಟ್ಟು ರಾಜಕಾರಣ ಮಾಡ್ತಾ ಇದ್ದೀರ!!” ನಾನು ಕೇಳಿದೆ, “ನಾವೆಲ್ಲಿ ರಾಜಕಾರಣ ಮಾಡ್ತಾ ಇದ್ದೀವಿ!? ಅಪ್ಪಾರಾವ್ ನಮ್ಮನ್ನ ಕೇಳಿ ನಮ್ಮ ಸಂಗಾತಿಗಳನ್ನ ಹೊರಹಾಕಿದ್ದರೇನು? ಪ್ರಶಾಂತ್, ರೋಹಿತ್ – ಇವರಿಗೆಲ್ಲ ಬಹಿಷ್ಕಾರ ಹಾಕುವಾಗ ನಮ್ಮನ್ನೇನು ಕೇಳಿರಲಿಲ್ಲ! ಅವರು ಕೇಳಿದ್ದು ರಾಜಕಾರಣ ಮಾಡುವ, ಸಂಸತ್ ಸದಸ್ಯ ದತ್ತಾತ್ರೇಯ ಅವರನ್ನ… ಮತ್ತೆ ನೀವು ನಾವು ರಾಜಕಾರಣ ಮಾಡ್ತಿದ್ದೀವಿ ಅನ್ತೀರಲ್ಲ! ಹಾಗೇ, ಸ್ಮೃತಿ ಜೀ ನಮ್ಮನ್ನ ಕೇಳಿ ಸ್ಕಾಲರ್ ಷಿಪ್ ತಡೆಹಿಡಿದಿದ್ದರೇನು? ನಮ್ಮನ್ನ ಕೇಳಿ ಯಾರು ಏನು ಮಾಡ್ತಿದ್ದಾರೆ ಇಷ್ಟಕ್ಕೂ! ನಿಮ್ಮ ನಡೆಗಳು ನಮ್ಮ ಬದುಕಿನ ಅಧಿಕಾರವನ್ನ ಕಿತ್ತುಕೊಳ್ತಿದೆ ಅಂತ ನಮಗೆ ಅನ್ನಿಸಿದರೆ, ನಾವದನ್ನ ವಿರೋಧಿಸ್ತೀವಿ. ನಿಮ್ಮ ಕೆಲಸಗಳಿಂದ ಈ ದೇಶದಲ್ಲಿ ಜಾತಿವಾದ, ಮನುವಾದಗಳು ಮತ್ತಷ್ಟು ಹರಡಿಕೊಳ್ತವೆ ಅಂತ ನಮಗನ್ನಿಸಿದರೆ, ನಾವು ಸಾಮಾಜಿಕ ನ್ಯಾಯವನ್ನು ಬಯಸುವ ಮಂದಿ ಅವುಗಳನ್ನು ವಿರೋಧಿಸಲು ಮುಂದಾಗ್ತೀವಿ. ರಾಜಕಾರಣ ಮಾಡೋರು ನೀವು. ನಾವು ನಿಮ್ಮ ಕೊಳಕು ರಾಜಕಾರಣವನ್ನು ವಿರೋಧಿಸುವರಷ್ಟೇ.

ನಮ್ಮ ಕ್ಯಾಂಪಸ್ಸಿನಲ್ಲೊಬ್ಬರು ಜನವಾದಿ ಕವಿ ಇದ್ದರು, ವಿದ್ರೋಹಿ ಜಿ ಅಂತ. ಆಂದೋಲನ ಕಟ್ಟಿಕೊಂಡು ಹೋರಾಡುತ್ತ ನಮ್ಮ ಜೊತೆಯೇ ವಿದ್ರೋಹಿ ಹಾಸ್ಟೆಲಿನಲ್ಲಿದ್ದರು. ಅವರಿಂದು ನಮ್ಮ ನಡುವೆ ಇಲ್ಲ. ಅವರ ನೆನಪಿನಲ್ಲಿ ನಾವು ನಮ್ಮ ಸ್ಟೂಡೆಂಟ್ಸ್ ಯೂನಿಯನ್ನಿನ ಹೆಸರು ‘ವಿದ್ರೋಹಿ ಭವನ್’ ಅಂತಲೇ ಇಟ್ಟುಕೊಂಡಿದ್ದೇವೆ. ನೀವು ತಪ್ಪು ರಾಜಕಾರಣ ಮಾಡ್ತಲೇ ಇರಿ, ನಾವು ಅದರ ವಿರುದ್ಧ ವಿದ್ರೋಹ ಮಾಡ್ತಲೇ ಇರ್ತೀವಿ! ಅವರು ಈ ಚರ್ಚೆಯನ್ನ ಬಹಳ ಚಾಲಾಕಿತನದಿಂದ ಬೇರೆ ದಿಕ್ಕಿಗೆ ತಿರುಗಿಸಿದ್ದಾರೆ. ಅವರು ಹೇಳ್ತಾರೆ, “ರಾಷ್ಟ್ರ ಎಲ್ಲಕ್ಕಿಂತ ದೊಡ್ಡದು. ಭಾರತ ಮಾತಾ ಕಿ ಜೈ ಅಂತ ಹೇಳಲೇಬೇಕು! ನಾನು ಯೋಚಿಸ್ತಿದ್ದೆ, ಮದುವೆಯಾದರೆ ನನ್ನ ಹೆಂಡತಿಯ ಹೆಸರನ್ನು ಭಾರತ್ ಮಾತಾ ಕಿ ಜೈ ಅಂತ ಬದಲಾಯಿಸೋಣ ಅಂತ... ನನ್ನ ಮಕ್ಕಳಿಗೂ ಭಾರತ ಮಾತಾ ಕಿ ಜೈ ಅಂತಲೇ ಹೆಸರಿಡೋದು ಅಂತ… ಅಷ್ಟೇಕೆ, ನನ್ನ  ಹೆಸರನ್ನೇ ಭಾರತ್ ಮಾತಾ ಕಿ ಜೈ ಎಂದು ಬದಲಾಯಿಸ್ಕೊಂಡುಬಿಡೋಣ ಅಂತ! ಯಾಕಂದ್ರೆ, ನನ್ನ ಮಗು ಸ್ಕೂಲಿಗೆ ಹೋಗುವಾಗ ನಿನ್ನ ಹೆಸರೇನು ಅಂದರೆ ‘ಭಾರತ್ ಮಾತಾ ಕಿ ಜೈ’…  ನಿನ್ನಪ್ಪನ ಹೆಸರೇನು ಅಂದರೆ ‘ಭಾರತ ಮಾತಾ ಕಿ ಜೈ’… ನಿನ್ನಮ್ಮನ ಹೆಸರೇನು ಅಂದರೆ ‘ಭಾರತ್ ಮಾತಾ ಕಿ ಜೈ’…. ಆಗ ಅದಕ್ಕೆ ಫೀಸ್ ಕೊಡಬೇಕಾದ ಅಗತ್ಯವೇ ಬೀಳೋದಿಲ್ಲ! ಆ ಮಗುವಿಗೆ  ಶಿಕ್ಷಣವೂ ಪುಕ್ಕಟೆಯಾಗೇ ಸಿಗುತ್ತದೆ!!

ಒಬ್ಬ ಬಂದು ಕೇಳಿದ, ಮೋದಿಜೀಗೆ ನೀನ್ಯಾಕೆ ಹೀಗೆ ತಗಲಾಕಿಕೊಳ್ತಿದೀಯ? ಅಂತ. ನಾನಂದೆ, ‘ಮೋದಿಜೀಗೆ ತಗಲಾಕಿಕೊಳ್ಳೋಕೆ ಹೇಗೆ ಸಾಧ್ಯ!? ನಾನಂತೂ ಮೋದಿಯವರ ಬಹಳ ದೊಡ್ಡ ಸಮರ್ಥಕ.’ ‘ಯಾವಾಗ?’ ‘ಅವರು ನಮ್ಮ ಖಾತೆಗಳಿಗೆ ಹದಿನೈದು ಲಕ್ಷ ಡಿಪಾಸಿಟ್ ಮಾಡಿಸ್ತೀನಿ ಅನ್ನುವಾಗ, ಭ್ರಷ್ಟಾಚಾರ ಕಡಿಮೆ ಮಾಡ್ತೀವಿ ಅನ್ನುವಾಗ, ಬೆಲೆಯೇರಿಕೆ ಮೇಲೆ ನಿಯಂತ್ರಣ ಹೇರ್ತೀನಿ ಅನ್ನುವಾಗೆಲ್ಲ ನಾನು ಅವರ ಕಟ್ಟಾ ಬೆಂಬಲಿಗನಾಗ್ತೀನಿ. ಆದರೆ ಅವರು ಹಾಗೆಲ್ಲ ಹೇಗೆ ಹೇಳಬಲ್ಲರು? ಅವರು ಹಾಗೆ ಹೇಳೋಕೆ ಸಾಧ್ಯವೇ ಇಲ್ಲ. ಯಾಕೆ ಹೇಳಿ? ಯಾಕಂದ್ರೆ ಅವರ ಸಂಬಂಧವಿರೋದು 1951ರಲ್ಲಿ ಸ್ಥಾಪನೆಗೊಂಡ ಭಾರತೀಯ ಜನಸಂಘದ ಜೊತೆಗಲ್ಲ, ಆರೆಸ್ಸೆಸ್ ಜೊತೆಗೆ! ಈ ರಾಷ್ಟ್ರೀಯ ಸ್ವಯಂಸೇವಕ ಸಂಘ ಏನು ಹೇಳತ್ತೆ? ಅದಕ್ಕೆ ರಾಷ್ಟ್ರವಾದ ಬೇಕಾಗೇ ಇಲ್ಲ. ಅದಕ್ಕೆ ಬೇಕಿರೋದು ಹಿಂದೂ ರಾಷ್ಟ್ರ. ಆದ್ದರಿಂದ ಆ ಜನಗಳನ್ನ ರಾಷ್ಟ್ರವಾದಿಗಳೆಂದು ಕರೀಬೇಡಿ. ಅವರು ಹಿಂದೂರಾಷ್ಟ್ರವಾದಿಗಳು. ಮತ್ತು ಈ ಹಿಂದೂ ರಾಷ್ಟ್ರ ಹೇಗಿರುತ್ತೆ? ಅಲ್ಲಿ ಬ್ರಾಹ್ಮಣರು ಬ್ರಾಹ್ಮಣರಾಗಿರ್ತಾರೆ, ದಲಿತರು ದಲಿತರಾಗೇ ಇರ್ತಾರೆ! ಅವರ ಸಂವಿಧಾನ ಭಾರತೀಯ ಸಂವಿಧಾನವಾಗಿರೋದಿಲ್ಲ, ಅದರ ಸಂವಿಧಾನ ಮನುಸ್ಮೃತಿಯಾಗಿರುತ್ತೆ. ಆದ್ದರಿಂದಲೇ ನಾವು ಅದನ್ನುವಿರೋಧಿಸ್ತಾ ಇದ್ದೀವಿ. ನಮ್ಮ ಸಂಗಾತಿಗಳೆಲ್ಲರೂ ಹೇಳ್ತಾ ಇರೋದು ಇದನ್ನೇ. ರಿಚಾ, ಶೆಹ್ಲಾ, ಉಮರ್, ಪ್ರಶಾಂತ್ – ನಾವೆಲ್ಲ ಹೋರಾಟ ನಡೆಸ್ತಿರೋದು ಇದರ ವಿರುದ್ಧವೇ. ನಾವು ಹಿಂದುಸ್ಥಾನದ ಒಳಗೆ, ಅದರ ವಿರುದ್ಧ ಸಂಘರ್ಷ ನಡೆಸ್ತಿಲ್ಲ. ಹಿಂದುಸ್ತಾನದ ಒಳಗೆ ನಿರ್ಮಿಸಲು ಹೊರಟಿರುವ ಸಂಘಿಸ್ತಾನದ ವಿರುದ್ಧ ಸಂಘರ್ಷ ನಡೆಸ್ತಿದ್ದೀವಿ. ಮತ್ತು ಈ ಸಂಘರ್ಷ ಸಂಘಿಸ್ತಾನ್ ವರ್ಸಸ್ ಹಿಂದೂಸ್ತಾನದ ಸಂಘರ್ಷ. ನಾವು ಹಿಂದೂಸ್ತಾನದ ಪರವಾಗಿ, ಹಿಂದೂಸ್ತಾನಕ್ಕಾಗಿ ಹೋರಾಟ ಮಾಡ್ತಿದ್ದೀವಿ, ಸಂಘಿಸ್ತಾನದ ವಿರುದ್ಧ.  ಆ ಜನಗಳು ಅಷ್ಟೇನೂ ಸೃಜನಶೀಲರಲ್ಲ. ಹೌದೇ ಆಗಿದ್ದಿದ್ದರೆ, ಬೈಗುಳಗಳನ್ನೇ ಮುಂದೆ ಮಾಡಿಕೊಂಡು ಅವರು ನಮ್ಮೆದುರು ಬರ್ತಿರಲಿಲ್ಲ. ಅವರಿಗೆ ನಿಂದನೆಯೊಂದೇ ಗೊತ್ತಿರೋದು. ಆದರೆ ನಾವೇನು ಮಾಡ್ತೀವಿ ಹೇಳಿ? ನಾವು ಪದ್ಯ ಬರೀತೀವಿ. ಅವರಿಗಾಗಿ ಶಾಯರಿ ಬರೀತೀವಿ. ಕತೆಗಳನ್ನ ಬರೀತೀವಿ. ಯಾಕಂದರೆ ನಮ್ಮಲ್ಲಿ ಸೃಜನಶೀಲತೆ ಇದೆ :-)

ಯಾರು ಹೆಚ್ಚು ಸೃಜನಶೀಲರೋ ಹೆಚ್ಚು ಅಪಾಯವಿರೋದು ಅವರಿಗೇನೆ. ಅವರು ಈತನಕ ಯಾವ ಕೆಲಸಗಳನ್ನಿವರು ಬಸ್ತಾರಿನಲ್ಲಿ ಮಾಡ್ತಿದ್ದರೋ, ಬಿಹಾರದ ಹಳ್ಳಿಗಳಲ್ಲಿ ಮಾಡ್ತಿದ್ದರೋ ಇವತ್ತು ಆ ಕೆಲಸಗಳನ್ನು ಯುನಿವರ್ಸಿಟಿಯ ಒಳಗೆ ಮಾಡ್ತಿದ್ದಾರೆ! ಯಾಕೆ ಮಾಡ್ತಿದ್ದಾರೆ? ಯಾಕೆಂದರೆ ಇವರು ಭೂಮಿ ನಿಂತಲ್ಲೇ ನಿಂತಿರುತ್ತೆ, ಸೂರ್ಯ ಅದರ ಸುತ್ತ ತಿರುಗ್ತಾನೆ ಅಂತ ನಂಬಿಕೊಂಡ ಮತದವರು. ಅದನ್ನೇ ಸಮರ್ಥಿಸಿಕೊಳ್ಳುವವರು. ಆದರೆ ನಾವು, ಸ್ಥಾಪಿತ ಮತಕ್ಕೆ, ಸ್ಥಾಪಿತ ಸತ್ಯಕ್ಕೆ ಸವಾಲೆಸೆಯುವವರು. ಯಾವುದು ಈ ಸ್ಥಾಪಿತ ಸತ್ಯ? ಸೌಂದರ್ಯದ ವಿಷಯವನ್ನೆ ತೆಗೆದ್ಕೊಳ್ಳಿ. ಬೆಳ್ಳಗಿರೋದು ಸುಂದರ, ಕಪ್ಪಗಿರೋದು ಸುಂದರವಲ್ಲ ಅನ್ನುವ ನಂಬಿಕೆ ಇದಕ್ಕೊಂದು ಉದಾಹರಣೆ. ಆದರೆ ನಾವು ಅದನ್ನು ಒಪ್ಪೋದಿಲ್ಲ. ಕಪ್ಪಗಿರೋರು ಕೂಡ ಸುಂದರವಾಗಿರ್ತಾರೆ. ಸ್ಥಾಪಿತ ಸತ್ಯ ಅದ್ಯಾವುದೇ ಇರಲಿ, ಪಾರಂಪರಿಕ ನಂಬಿಕೆ, ಜಾತಿವಾದ, ಮನುವಾದ, ಉಚ್ಚನೀಚದ ಭೇದಭಾವ, ಬಂಡವಾಳವಾದ, ತಾರತಮ್ಯ ನೀತಿ – ನಾವು ಈ ಎಲ್ಲ ಸ್ಥಾಪಿತ ಸತ್ಯಗಳಿಗೆ ಸವಾಲೆಸೀತೀವಿ; ಆದ್ದರಿಂದಲೇ ಅವರು ನಮ್ಮ ಯುನಿವರ್ಸಿಟಿಗಳಿಗೆ ಕಾಲಿಡುತ್ತಿದ್ದಾರೆ. ನಿಮ್ಮಲ್ಲಿ ಯೋಚಿಸುವ ವ್ಯವಧಾನವಿಲ್ಲದೆ ಹೋದರೆ, ನೀವು ಯುವಕರಾಗಿರುವುದಿಲ್ಲ. ಆದ್ದರಿಂದ ನನ್ನ ಪ್ರಕಾರ ಮೋದಿ ಜೀ ಯುವಕರಲ್ಲ. ನಿವೃತ್ತಿಯ ವಯಸಿನ ಮೋದಿ ಜೀ 55 ಕೋಟಿ ಜನರ ನೇತಾ ಹೇಗಾಗ್ತಾರೆ?  ನೀವು ನಮ್ಮ ನಾಯಕರಲ್ಲ ಮೋದಿ ಜೀ. ನಾವು ನವಯುವಕರು. ನಾವು ಇವತ್ತು ಏನು ಅನುಭವಿಸ್ತಿದ್ದೀವೋ ಅದರಿಮದಾಗಿಯೇ ನಮ್ಮ ಹೋರಾಟ ಹುಟ್ಟಿಕೊಂಡಿದೆ. ಮುಂದಿನ ಪೀಳಿಗೆ ಇದನ್ನು ಅನುಭವಿಸುವಂತಾಗಬಾರದು ಅನ್ನುವುದೇ ನಮ್ಮ ಕಾಳಜಿ. ನಾವು ಹೋರಾಡ್ತಿರುವುದೂ ಅದಕ್ಕಾಗಿಯೇ. ಈ ದೇಶದೊಳಗೆ ಜಾತಿವಾದ ಏನಿದೆ, ಅಸ್ಪೃಷ್ಯತೆ ಏನಿದೆ, ತಾರತಮ್ಯ ಏನಿದೆ… ಈ ದೇಶದೊಳಗೆ ರೈತ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಅಸಹಾಯಕತೆಯೇನಿದೆ… ಈ ದೇಶದ ಬಡವರ ಸಂಕಷ್ಟಗಳೇನಿವೆ… ಅವುಗಳ ಬಗ್ಗೆ ಮಾತಾಡೋದೇ ರಾಷ್ಟ್ರವಾದ. ನನ್ನ ಪ್ರಕಾರ ಭಾರತೀಯ ರೈಲ್ವೇಯ ಜನರಲ್ ಬೋಗಿಯ ಬಗ್ಗೆ ಮಾತಾಡೋದು ರಾಷ್ಟ್ರವಾದ.

ಈಗ ಇನ್ನೊಂದು ಪ್ಯಾಟರ್ನ್ ಹುಟ್ಕೊಂಡಿದೆ. ಹಾರ್ಡ್ ಕೋರ್ ಸಂಘಿಗಳಿಗಿಂತ ಬೇರೆ ರೇತಿಯದು. ಇವರು ಸಾಫ್ಟ್ ಕೋರ್ ಸಂಘಿಗಳು. ಇವರು ಎಲ್ಲ ಕಡೆ ಕಾಣಸಿಗ್ತಾರೆ. ಇವರು ಕೇಳ್ತಾರೆ; “ಅದೆಲ್ಲಾ ಸರಿ,  ಈ ನಾರೇಬಾಜಿ (ಘೋಷಣೆ ಕೂಗೋದು) ಯಾಕಾಗಿ!?” ನಾರೇಬಾಜಿ ಕೂಗೋದು ತಪ್ಪಾ ಹಾಗಾದರೆ? ಇರಲಿ, ತಪ್ಪು ಅಂತಲೇ ಇಟ್ಕೊಳ್ಳೋಣ. ತಪ್ಪಾಗಿದೆ. ಆದ್ರೆ, ಒಂದು ಮಾತು…. ಕೇವಲ ಘೋಷಣೆಗಳಿಗೆ ಅದುರಿಹೋಗುವಷ್ಟು ನಮ್ಮ ದೇಶ ದುರ್ಬಲವಾಗಿದೆಯೇನು? ಹಾಗಾದರೆ ನಿಮಗೆ ಈ ದೇಶದ ಸಾಮರ್ಥ್ಯದ ಅಂದಾಜಿಲ್ಲ, ಅಥವಾ ಈ ದೇಶ ಕಟ್ಟುವಲ್ಲಿ ಎಷ್ಟು ಜನ ತಮ್ಮ ಬಲಿಕೊಟ್ಟುಕೊಂಡಿದ್ದಾರೆ ಅನ್ನುವ ಮಾಹಿತಿಯಿಲ್ಲ. ಇಂಥ ಈ ದೇಶ ಯಾರದೋ ನಾರೆಬಾಜಿಗೆ ನಡುಗುವಷ್ಟು ದುರ್ಬಲವಾಗಿಲ್ಲ. ಅದಿರಲಿ, ಇಷ್ಟಕ್ಕೂ ಘೋಷಣೆ ಕೂಗೋದು ದೇಶದ್ರೋಹವಾ? ಇರಬಹುದೇನೋ… ನನಗೆ ಕಾನೂನು ಗೊತ್ತಿಲ್ಲ. ನನ್ನ ಪ್ರಕಾರ ದೇಶದ ವಿರುದ್ಧ ಘೋಷಣೆ ಕೂಗೋದು ತಪ್ಪು. ಆದರೆ ನನ್ನದೊಂದು ಪ್ರಶ್ನೆಯಿದೆ. ಘೋಷಣೆ ಕೂಗುವವರು ದೇಶದ್ರೋಹಿಗಳಾಗಿಬಿಡ್ತಾರಾ? ಈ ದೇಶದೊಳಗೆ, ಪಾರ್ಲಿಮೆಂಟಿನ ಒಳಗೆ ಕೂತುಕೊಂಡು ಜನರ ಹಕ್ಕುಗಳನ್ನ ಹೊಡೆಯುವವರನ್ನ ಏನಂತ ಕರೀತೀರಿ ಹಾಗಾದರೆ?  ಬಾಬಾ ಸಾಹೇಬ್ ಭೀಮ ರಾವ್ ಅಂಬೇಡ್ಕರ್ ಮೂಲಕ ನಮ್ಮ ದೇಶವೊಂದು ಕನಸು ಕಂಡಿತ್ತು. ಗಾಂಧೀಜಿಯವರ ಮೂಲಕ ಒಂದು ಕನಸು ಕಂಡಿತ್ತು. ಭಗತ್ ಸಿಂಗ್ ಮೂಲಕ ಒಂದು ಕನಸು ಕಂಡಿತ್ತು. ಯಾವ ಗುಲಾಮಗಿರಿಯ ವಿರುದ್ಧ ಹೋರಾಡಲು ನಮಗೊಂದು ಊರುಗೋಲಿದೆಯೋ ಆ ಊರುಗೋಲಿನ ವಿರುದ್ಧ ನಮ್ಮ ಸಂಸತ್ ಕೆಲಸ ಮಾಡ್ತಿರೋದು ಹೌದೋ ಅಲ್ಲವೋ ಅನ್ನುವ ಪ್ರಶ್ನೆ ನಾನು ಕೇಳಬಯಸ್ತೀನಿ. ಹಾಗೊಮ್ಮೆ ಮಾಡ್ತಿದೆಯಾದರೆ, ಅದರ ವಿರುದ್ಧ ಮಾತಾಡದೆ ಇರೋದು ದೇಶದ್ರೋಹವಾಗೋದಿಲ್ವಾ?  ಜನರ ನಡುವೆ ದ್ವೇಷವನ್ನ ತುಂಬೋದು, ಪ್ರಜೆಗಳನ್ನು ಪರಸ್ಪರ ಎತ್ತಿಕಟ್ಟೋದು ಇವೆಲ್ಲ ದೇಶದ್ರೋಹವಲ್ವಾ?

ಜನರ ಮಾತು ಬಿಡಿ, ಪ್ರಾಣಿಗಳನ್ನು ಕೂಡ ಇದರೊಳಕ್ಕೆ ಎಳೆದು ತರಲಾಗಿದೆ. ಅವರ ಪ್ರಕಾರ ಜೇಡ ಹಿಂದೂ ಮತ್ತು ಓತಿಕ್ಯಾತ ಮುಸಲ್ಮಾನ. ಈಗ ಹೇಳಿ…. ನಮ್ಮ ತಲೆಯೊಳಗೆ ಇಷ್ಟೊಂದು ಭೂಸಾ ತುಂಬಿದರೆ ನಮ್ಮ ಪೀಳಿಗೆ ಸಹಜವಾಗಿ ಗೊಂದಲದ ಪೀಳಿಗೆಯೇ ಆಗುವುದು. ನಮ್ಮನ್ನು ಸಂಪೂರ್ಣವಾಗಿ ಗೊಂದಲದ ಗೂಡಿಗೆ ತಳ್ಳಲಾಗಿದೆ. ಮತ್ತು ಎಲ್ಲರಿಗೂ ಜೆ ಎನ್ ಯು ಅಥವಾ ಎಚ್ ಸಿ ಯು ನಲ್ಲಿ ಓದುವ ಮತ್ತು ಸ್ಮೃತಿ ಜೀಯ ಆಶೀರ್ವಾದ ಪಡೆಯುವ ಅವಕಾಶ ಸಿಗೋದಿಲ್ಲ. ನನ್ನ ಹೆಸರು ಕನ್ಹಯ್ಯ ಅಲ್ವಾ… ನಾನು ಯೋಚಿಸ್ತಿದ್ದೆ. ಹಿಂದೂ ಪುರಾಣದ ಪ್ರಕಾರ ಕನ್ಹಯ್ಯನಿಗೆ ಇಬ್ಬರು ಅಮ್ಮಂದಿರು. ಒಬ್ಬಳು ಹೆತ್ತಳು, ಮತ್ತೊಬ್ಬಳು ಬೆಳೆಸಿದಳು. ಇತ್ತಿಚೆಗೆ ನನಗೂ ಪವಾಡವೆಂಬಂತೆ ಒಬ್ಬರು ಅಮ್ಮಂದಿರು ಆಗಿದ್ದಾರೆ. ಒಬ್ಬರು ಜನ್ಮ ನೀಡಿದ್ದಾರೆ, ಮತ್ತೊಬ್ಬರು ಪೋಷಿಸ್ತಿದ್ದಾರೆ. ಈ ಎರಡನೆಯವರು ಏನಿದ್ದಾರೆ, ಅವರು ಪಾರ್ಲಿಮೆಂಟಿನಲ್ಲಿ ನಿಂತು ಹೇಳ್ತಾರೆ, “ಮೆ ಮಾ ಹೂಂ!” ಅಮ್ಮಾವ್ರೇ, ನೀವು ಶ್ರೀನಗರಕ್ಕೆ ಧಾವಿಸಿ ಹೋದಿರಿ. ನಿಮ್ಮ ಮನೆಯ ಹತ್ತಿರದಲ್ಲೇ ಜೆ ಎನ್ ಯು ಇದೆ. ಒಮ್ಮೆ ಬಂದು ಭೇಟಿಯಾಗಬಹುದಿತ್ತಲ್ಲ? ಅರೆ! ನಮ್ಮನ್ನು ಭೇಟಿಯಾಗೋದೇನೂ ಬೇಡವಿತ್ತು, ಈ ದೇಶದ ರಕ್ಷಣೆಗಾಗಿ ಹೋರಾಡ್ತಿರುವವರನ್ನಾದರೂ ಬಂದು ಮಾತಾಡಿಸಬಹುದಿತ್ತಲ್ಲ?ಕ್ಯಾಂಪಸ್ಸಿನ ಒಳಗೆ ಯುದ್ಧ ಹುಟ್ಟುಹಾಕಿರೋದು ಪ್ರಜಾಪ್ರಭುತ್ವ ವಿರೋಧಿ ನಡೆ. ಕ್ಯಾಂಪಸ್ಸಿನೊಳಗೆ ಪ್ರಾಯೋಜಿತ ಹಿಂಸೆ ನಡೆಸಲಾಗ್ತಿದೆ. ಇದು ಕೂಡ ಪ್ರಜಾಪ್ರಭುತ್ವದ ವಿರೋಧಿ ನಡೆ. ಇಂದು ಈ ದೇಶದಲ್ಲಿ ಕ್ಯಾಂಪಸ್ ಗಳನ್ನು ರಣಾಂಗಣವನ್ನಾಗಿ ಮಾಡಲಾಗ್ತಿದೆ. ಈ ವೇದಿಕೆಯಿಂದ ನಾನು ಶ್ರೀನಗರದಲ್ಲಾದ ಹಿಂಸೆಯನ್ನ ವಿರೋಧಿಸ್ತೀನಿ. ಯಾಕೆಂದರೆ ಇದು ಪ್ರಾಯೋಜಿತ ಹಿಂಸೆ. ಇದು ಲೋಕತಂತ್ರಕ್ಕೆ ವಿರುದ್ಧವಾದುದು. ನಾವು ಕ್ಯಾಂಪಸ್ ಡೆಮಾಕ್ರಸಿಯನ್ನು ಉಳಿಸಿಕೊಳ್ಳಬೇಕಿದೆ. ಅದನ್ನು ನಾವು ಮಾಡಿಯೇ ತೀರುತ್ತೇವೆ, ನೀವು ಏನು ಬೇಕಾದರೂ ಅಡ್ಡಿಪಡಿಸಿ. 
.
(ಕನ್ಹಯ್ಯ ಕುಮಾರ್ ಏಪ್ರಿಲ್ 8ರಂದು ಪ್ರತಿರೋಧ್ 2 ವೇದಿಕೆಯಲ್ಲಿ ಮಾಡಿದ ಭಾಷಣದ ಆಯ್ದ ಭಾಗ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News