ದಕ್ಷಿಣ ಆಫ್ರಿಕ ತಂಡದ ಮೂಲಕ ಕ್ರಿಕೆಟ್‌ಗೆ ಮರಳುವತ್ತ ಪೀಟರ್ಸನ್ ಚಿತ್ತ
ಮುಂಬೈ, ಎ.10: ಇಂಗ್ಲೆಂಡ್‌ನ ಮಾಜಿ ಆಟಗಾರ ಕೇವಿನ್‌ಪೀಟರ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಆಡುವ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಆದರೆ, ಅವರು ತಾಯ್ನಾಡು ದಕ್ಷಿಣ ಆಫ್ರಿಕ ತಂಡದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವತ್ತ ದೃಷ್ಟಿ ನೆಟ್ಟಿದ್ದಾರೆ.
2013-14ರಲ್ಲಿ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ವೈಟ್‌ವಾಶ್ ಅನುಭವಿಸಿದ್ದಾಗ ಪೀಟರ್ಸನ್‌ರನ್ನು ಇಂಗ್ಲೆಂಡ್ ತಂಡದಿಂದ ಹೊರಗಿಡಲಾಗಿತ್ತು. ಪೀಟರ್ಸನ್ ಇಂಗ್ಲೆಂಡ್ ತಂಡದ ಪರ ಮತ್ತೊಮ್ಮೆ ಆಡಲು ಬಯಸಿದ್ದರೂ ಆಯ್ಕೆ ಸಮಿತಿ ಅವರನ್ನು ತಂಡದಿಂದ ದೂರ ಇಡುತ್ತಾ ಬಂದಿದೆ.
‘‘ಹೌದು, ದಕ್ಷಿಣ ಆಫ್ರಿಕ ತಂಡದಲ್ಲಿ ಆಡುವ ಯೋಚನೆ ನನ್ನಲ್ಲಿದೆ. ಇದು ನಡೆದರೆ ನಡೆಯಲೂಬಹುದು. ನಡೆಯದೇ ಇರಲೂ ಬಹುದು. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಆಡಬೇಕೆಂಬುದು ನನ್ನ ದೀರ್ಘಕಾಲದ ಕನಸಾಗಿದೆ.ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದರಿಂದ ವಂಚಿತನಾಗಿದ್ದೇನೆ’’ ಎಂದು ಪೀಟರ್ಸನ್ ಹೇಳಿದ್ದಾರೆ.
35ರ ಹರೆಯದ ಪೀಟರ್ಸನ್‌ಗೆ 37 ವರ್ಷವಾದಾಗ ದಕ್ಷಿಣ ಆಫ್ರಿಕ ತಂಡದಲ್ಲಿ ಆಡುವ ಅರ್ಹತೆ ಪಡೆಯುತ್ತಾರೆ. ಅದಕ್ಕಾಗಿ ಅವರು 2018ರ ತನಕ ಕಾಯಬೇಕು.
‘‘ದಕ್ಷಿಣ ಆಫ್ರಿಕ ತಂಡದಲ್ಲಿ ಆಡುವ ಅರ್ಹತೆ ಗಿಟ್ಟಿಸಲು ನನಗೆ ಇನ್ನು ಎರಡು ವರ್ಷ ಬೇಕಾಗಿದೆ. ನಾವು ಅದಕ್ಕಾಗಿ ಕಾದು ನೋಡಬೇಕಾಗಿದೆ. ಖಂಡಿತವಾಗಿಯೂ ಇದು ನನ್ನ ಮುಂದಿರುವ ಒಂದು ಆಯ್ಕೆಯಾಗಿದೆ. ಇದೀಗ ನಾನು ಕ್ರಿಕೆಟ್ ಆಡುವುದನ್ನು ಆನಂದಿಸುತ್ತಿದ್ದೇನೆ. ಈಗಲೂ ಕಠಿಣ ಶ್ರಮಪಡುತ್ತಿರುವೆ. ಬ್ಯಾಟಿಂಗ್ ಮಾಡುವುದೆಂದರೆ ತುಂಬಾ ಇಷ್ಟ. 10 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿ, 100ಕ್ಕೂ ಅಧಿಕ ಟೆಸ್ಟ್ ಪಂದ್ಯಗಳನ್ನು ಆಡುವ ಭಾಗ್ಯ ನನಗೆ ದೊರೆತಿದೆ ಎಂದು ಪೀಟರ್ಸನ್ ನುಡಿದರು.
ಪೀಟರ್ಸನ್ ಪ್ರಸ್ತುತ ಐಪಿಎಲ್‌ನಲ್ಲಿ ಹೊಸ ತಂಡ ರೈಸಿಂಗ್‌ಪುಣೆ ಸೂಪರ್ ಜೈಂಟ್ಸ್‌ನ್ನು ಪ್ರತಿನಿಧಿಸುತ್ತಿದ್ದಾರೆ. ಮುಂಬೈ ವಿರುದ್ಧ ಶನಿವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ 14 ಎಸೆತಗಳಲ್ಲಿ ಔಟಾಗದೆ 21 ರನ್ ಗಳಿಸಿದ್ದರು.