×
Ad

ಶಪಥ ಮಾಡುತ್ತೀರಾ..?

Update: 2016-04-10 23:50 IST

ಮಾನ್ಯರೆ,
‘ಹಳೆ ಹೆಂಡತಿಯ ಪಾದವೇ ಗತಿ’ ಎಂಬಂತೆ ಬಿಜೆಪಿ ಹೈಕಮಾಂಡ್, ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ.ಎಸ್.ಯಡಿಯೂರಪ್ಪರನ್ನು ಆಯ್ಕೆ ಮಾಡಿದೆ. ಈ ಮೂಲಕ ಮುಂದಿನ ಎರಡು ವರ್ಷಗಳಲ್ಲಿ ಬಿಜೆಪಿ ರಾಜ್ಯದಲ್ಲಿ ಮತ್ತೆ ತಳಮಟ್ಟದಿಂದ ಬಲವರ್ಧನೆ ಮಾಡುವ ಯೋಚನೆ ಬಿಜೆಪಿ ಪಡೆಯದ್ದು. ಈ ಸಾಧ್ಯತೆ ಕೇವಲ ಯಡಿಯೂರಪ್ಪರಿಂದ ಸಾಧ್ಯ ಎಂದು ಮನಗಂಡು ಇವರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಯಾದ ಬೆನ್ನಲ್ಲೇ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿರುವ ಯಡಿಯೂರಪ್ಪನವರು, ಸಿದ್ದರಾಮಯ್ಯ ಸರಕಾರದಲ್ಲಿ ಭ್ರಷ್ಟರು ಇದ್ದಾರೆ ಎಂದು ಆರೋಪಿಸಿದ್ದಾರೆ. ಒಂದಂತೂ ಯಡಿಯೂರಪ್ಪನವರು ನೆನಪಿಡಬೇಕು. ಏನೆಂದರೆ ಅವರು ರಾಜ್ಯದ ಸಿಎಂ ಆಗಿದ್ದಾಗ ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿ ಅಧಿಕಾರ ಕಳೆದುಕೊಂಡಿದ್ದರು. ಹೀಗಾಗಿ ಇವರಿಗೆ ರಾಜ್ಯ ಸರಕಾರವನ್ನು ಹೀಗಳೆಯುವ ನೈತಿಕತೆ ಇಲ್ಲ. ಹೊಸದಾಗಿ ಅಧ್ಯಕ್ಷರಾಗಿರಬಹುದು. ಆದರೆ ಇನ್ನು ಮುಂದೆ ತಮ್ಮ ಅಧಿಕಾರಾವಧಿಯಲ್ಲಿ ತಾನೂ ಭ್ರಷ್ಟನಾಗಲ್ಲ, ತನ್ನ ಜೊತೆಗೆ ಭ್ರಷ್ಟರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು. ಆ ಧೈರ್ಯವನ್ನು ನೋಡಲು ರಾಜ್ಯದ ಜನತೆ ಕಾಯುತ್ತಿದ್ದಾರೆ. ಇದೀಗ ದಲಿತರ ಮನವೊಲಿಸಲು ಪ್ರಯತ್ನಿಸುತ್ತಿರುವ ಯಡಿಯೂರಪ್ಪನವರು ಅಂಬೇಡ್ಕರ್ ದಿನದಂದೇ ಅಧಿಕಾರ ಸ್ವೀಕರಿಸುವುದಾಗಿ ಹೇಳಿದ್ದಾರೆ. ಇದು ಕೂಡಾ ವೋಟ್‌ಬ್ಯಾಂಕ್ ತಂತ್ರ. ಜಾತಿ ಲೆಕ್ಕಾಚಾರ ಬಿಟ್ಟು ಜಾತಿ, ಗುಂಪುಗಾರಿಕೆ ಹೊರತಾದ ರಾಜಕೀಯ ಕಟ್ಟಲು ಬಿಎಸ್‌ವೈ ಪ್ರಯತ್ನಿಸಬೇಕಾಗಿದೆ. ಇದು ಕಷ್ಟಸಾಧ್ಯವಾದರೂ ಕನಿಷ್ಠ ಪ್ರಯತ್ನವನ್ನಾದರೂ ಅವರು ಮಾಡಬೇಕಾಗಿದೆ. ಈ ಮಧ್ಯೆ ರಾಜ್ಯಾಧ್ಯಕ್ಷ ಸ್ಥಾನವನ್ನು ಲಿಂಗಾಯತ ವ್ಯಕ್ತಿ(ಬಿಎಸ್‌ವೈ)ಗೆ ಕೊಟ್ಟಾಯಿತು. ವಿಪಕ್ಷ ಸ್ಥಾನ ಸಹ ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್ ಪಾಲಿಗಿದೆ. ಇದನ್ನು ಕಿತ್ತುಕೊಳ್ಳಲು ಇತರ ಬಿಜೆಪಿ ನಾಯಕರು ಪ್ರಯತ್ನಿಸುವ ಮೂಲಕ ಮತ್ತೊಂದು ಜಾತಿ ರಾಜಕಾರಣ ಮಾಡುತ್ತಿರುವುದು ದೊಡ್ಡ ದುರಂತ. ಜಾತಿ, ಗುಂಪುಗಾರಿಕೆ ರಾಜಕಾರಣ ಮಾಡುವ ಯಾವ ಪಕ್ಷಕ್ಕೂಖಂಡಿತಾ ಉಳಿಗಾಲವಿಲ್ಲ. ನಮಗೆ ಬೇಕಾಗಿರುವುದು ಮನುಷ್ಯ ರಾಜಕಾರಣ..!
 

Writer - - ಶಂಶೀರ್ ಬುಡೋಳಿ

contributor

Editor - - ಶಂಶೀರ್ ಬುಡೋಳಿ

contributor

Similar News