ಐಪಿಎಲ್ ಸ್ಥಳಾಂತರದಿಂದ ಬರ ಬಿಕ್ಕಟ್ಟು ನಿವಾರಣೆಯಾಗದು: ಧೋನಿ
ಮುಂಬೈ, ಎ.10: ‘‘ಐಪಿಎಲ್ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವುದರಿಂದ ಮಹಾರಾಷ್ಟ್ರದ ಬರ ಸಮಸ್ಯೆ ನಿವಾರಣೆಯಾಗದು. ಬರ ಬಿಕ್ಕಟ್ಟು ನಿವಾರಣೆಯು ದೀರ್ಘಕಾಲದ ಪ್ರಕ್ರಿಯೆಯಾಗಿದೆ’’ಎಂದು ಭಾರತದ ಸೀಮಿತ ಓವರ್ ಪಂದ್ಯದ ನಾಯಕ ಎಂ.ಎಸ್. ಧೋನಿ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆತೋರಿರುವ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಗಳನ್ನು ಮಹಾರಾಷ್ಟ್ರದಿಂದ ಸ್ಥಳಾಂತರಿಸಲಾಗುತ್ತದೆ ಎಂದು ವರದಿಯ ಬಗ್ಗೆ ಧೋನಿ ಪ್ರತಿಕ್ರಿಯಿಸಿದರು.
‘‘ ನನ್ನ ಪ್ರಕಾರ ಬರ ಪರಿಸ್ಥಿತಿ ನಿವಾರಣೆಗೆ ದೀರ್ಘಕಾಲದ ಪರಿಹಾರದ ಅಗತ್ಯವಿದೆ. ಆ ನಿಟ್ಟಿನಲ್ಲಿ ನಾವು ಗಮನ ನೀಡಬೇಕಾಗಿದೆ. ನೀರಿಲ್ಲದ ಪ್ರದೇಶಕ್ಕೆ ತಕ್ಷಣವೇ ನೀರನ್ನು ಸರಬರಾಜು ಮಾಡಲು ಸಾಧ್ಯವಿಲ್ಲ. ಇದಕ್ಕೆ ಪೂರ್ವ ತಯಾರಿ ಬೇಕಾಗುತ್ತದೆ. ಪಂದ್ಯ ನಡೆಯುತ್ತದೋ? ಇಲ್ಲವೊ? ಎಂಬ ಕುರಿತು ಎಲ್ಲರೂ ಮಾತನಾಡುತ್ತಾರೆ. ದೇಶದಲ್ಲಿ ದೀರ್ಘಕಾಲದ ಪರಿಹಾರವನ್ನು ಅಳವಡಿಸಿಕೊಂಡು ಆ ದಿಕ್ಕಿನಲ್ಲಿ ಸಾಗಬೇಕಾಗಿದೆ’’ ಎಂದು ವಿಕೆಟ್‌ಕೀಪರ್-ದಾಂಡಿಗ ಹೇಳಿದ್ದಾರೆ.