ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ: ಸಂವಿಧಾನದ ಆಧಾರದಲ್ಲಿ ನಿರ್ಧರಿಸುವೆ - ಸುಪ್ರೀಂ
ಹೊಸದಿಲ್ಲಿ, ಎ.11: ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆಗೆ ಋತುಸ್ರಾವದ ವಯಸ್ಸಿನೊಳಗಿನ ಸ್ತ್ರೀಯರಿಗೆ ಪ್ರವೇಶಿಸಲು ಹಕ್ಕಿದೆಯೇ ಎಂಬುದನ್ನು ತಾನು ಸಂವಿಧಾನದ ತತ್ವಗಳ ಆಧಾರದಲ್ಲಿ ನಿರ್ಧರಿಸುವೆನೇ ಹೊರತು ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ಆಚರಣೆಗಳ ಆಧಾರದಲ್ಲಿ ಅಲ್ಲವೆಂದು ಸುಪ್ರೀಂಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ ಹಾಗೂ ದೇಶದಲ್ಲಿ ಲಿಂಗ ನ್ಯಾಯವು ಅಪಾಯದಲ್ಲಿದೆಯೆಂದು ಅದು ಆತಂಕ ವ್ಯಕ್ತಪಡಿಸಿದೆ.
ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ಕೋರಿ ಭಾರತೀಯ ಯುವ ನ್ಯಾಯವಾದಿಗಳ ಸಂಘ (ಐವೈಎಲ್‌ಎ) ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
‘‘ಶಬರಿಮಲೆಯಲ್ಲಿ ಎಲ್ಲ ವಯಸ್ಸಿನ ಮಹಿಳೆಯರಿಗೆ ಅವಕಾಶ ನೀಡುವ ವಿಚಾರದ ಬಗ್ಗೆ ಸಂವಿಧಾನದ ಮಾರ್ಗದರ್ಶನವನ್ನು ನಾವು ಪಡೆಯುತ್ತೇವೆ. ದೇಶದಲ್ಲಿ ಲಿಂಗ ನ್ಯಾಯವು ಅಪಾಯದಲ್ಲಿರುವ ಹಿನ್ನೆಲೆಯಲ್ಲಿ ಈ ಅರ್ಜಿಯು ಹೆಚ್ಚಿನ ಪ್ರಾಧ್ಯಾನತೆಯನ್ನು ಪಡೆದಿದೆ’’ ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ತಿಳಿಸಿದೆ.
‘‘ನೀವು ಮಹಿಳೆಯರಿಗೆ ವೌಂಟ್ ಎವರೆಸ್ಟ್ ಆರೋಹಣ ಮಾಡಲು ಅವಕಾಶ ನಿರಾಕರಿಸುತ್ತಿರಾ?. ಯಾವುದಾದರೂ ನಿಷೇಧವನ್ನು ವಿಧಿಸುವುದರೆ ಅದು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು ಮತ್ತು ಅದಕ್ಕೆ ಸಂವಿಧಾನದ ತಳಹದಿಯಿರಬೇಕು’’ ಎಂದು ವಿ.ಗೋಪಾಲ ಗೌಡ ಹಾಗೂ ಕುರಿಯನ್ ಜೋಸೆಫ್ ಅವರನ್ನೂ ಒಳಗೊಂಡ ನ್ಯಾಯಪೀಠ ತಿಳಿಸಿದೆ.
ಶಬರಿಮಲೆ ದೇಗುಲಕ್ಕೆ ಋತುಸ್ರಾವದೊಳಗಿನ ವಯಸ್ಸಿನ ಮಹಿಳೆಯರಿಗೆ ನಿಷೇಧವು ಹಲವು ಶತಮಾನಗಳಷ್ಟು ಹಿಂದಿನ ಸಂಪ್ರದಾಯವಾಗಿದ್ದು, ಸಂವಿಧಾನವು ಅಸ್ತಿತ್ವಕ್ಕೆ ಬರುವುದಕ್ಕಿಂತಲೂ ಮೊದಲೇ ಅಸ್ತಿತ್ವದಲ್ಲಿತ್ತೆಂಬ ದೇವಾಲಯದ ಆಡಳಿತ ಮಂಡಳಿಯ ಪರ ವಕೀಲರ ವಾದಕ್ಕೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.