ಸೈನಿಕರ ಪರಿಹಾರ ನಿಧಿಗೆ ಮಾರ್ಗಸೂಚಿಗಳನ್ನು ರೂಪಿಸಿ
ಮಾನ್ಯರೆ,
ನಮ್ಮ ದೇಶದ ಗಡಿಯನ್ನು ಕಾಯುವ ಸೈನಿಕರು ಅನೇಕ ಸಂದರ್ಭಗಳಲ್ಲಿ ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಈಗ ಸಿಯಾಚಿನ್ ಪ್ರದೇಶದಲ್ಲಿ ಹಿಮಪಾತದಲ್ಲಿ ಸಿಲುಕಿ ಕರ್ನಾಟಕದ ಮೂವರು ಸೈನಿಕರು ವೀರ ಮರಣವನ್ನು ಅಪ್ಪಿದ್ದಾರೆ. ಸೈನಿಕರು ಈ ರೀತಿ ಅಕಾಲಿಕವಾಗಿ ಅಥವಾ ಹೋರಾಟದ ಹಿನ್ನೆಲೆಯಲ್ಲಿ ಹುತಾತ್ಮರಾದ ಸಂದರ್ಭದಲ್ಲಿ ಅವರಿಗೆ ಪರಿಹಾರ ನೀಡುವಾಗ ರಾಜ್ಯ ಸರಕಾರಗಳು ಯಾವುದೇ ರೀತಿಯ ನಿರ್ದಿಷ್ಟ ಮಾನದಂಡವನ್ನು ಇಲ್ಲಿಯ ತನಕ ರೂಪಿಸಿರದ ಕಾರಣ ಕೆಲವರಿಗೆ ಹೆಚ್ಚಿನ ಮೊತ್ತದ ಪರಿಹಾರ ಮತ್ತೆ ಕೆಲವರಿಗೆ ಕಡಿಮೆ ಮೊತ್ತದ ಪರಿಹಾರ ದೊರೆತಿರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸೈನಿಕರಿಗೆ ನೀಡುವಂತಹ ಪರಿಹಾರದ ವಿಚಾರದಲ್ಲಿ ಒಂದು ನಿರ್ದಿಷ್ಟವಾದ ಸೂತ್ರವನ್ನು ರೂಪಿಸಬೇಕು. ಅವರ ಸೇವಾ ಅವಧಿ, ಅವರ ಸಾಹಸ, ಅವರ ತ್ಯಾಗ, ಮತ್ತು ಅವರ ಕೌಟುಂಬಿಕ ಹಿನ್ನೆಲೆ ಹಾಗೂ ಅವರ ವಯಸ್ಸು ಇವುಗಳನ್ನು ಮಾನದಂಡವನ್ನಾಗಿ ಮಾಡಿಕೊಂಡು ಪರಿಹಾರದ ಮೊತ್ತಗಳನ್ನು ನಿಗದಿಪಡಿಸಬೇಕು. ಸೈನ್ಯಕ್ಕೆ ಸೇರುವಂತಹ ವ್ಯಕ್ತಿಗಳಿಗೆ ಈ ರೀತಿಯ ಅಪಾಯಗಳು ಆದಾಗ ಇಷ್ಟು ಮೊತ್ತವನ್ನು ರಾಜ್ಯ ಸರಕಾರ ಪರಿಹಾರದ ರೂಪದಲ್ಲಿ ನೀಡುತ್ತಾದೆಯೆಂಬ ಖಚಿತವಾದ ಚಿತ್ರಣ ದೊರೆತರೆ ಕನಿಷ್ಠ ಅವರ ಕುಟುಂಬದವರಿಗೆ ಭದ್ರತೆಯ ನೆಲೆಯಾದರೂ ದೊರೆಯುತ್ತದೆ. ಸಿಯಾಚಿನ್ ಪ್ರದೇಶದಲ್ಲಿ ತಾಳಲಾರದ ಚಳಿಯಲ್ಲಿ ನಮ್ಮನ್ನು ಕಾಯುವ ವೀರ ಯೋಧರ ದೇಹಗಳ ರಕ್ಷಣೆಗೆ ಕೇಂದ್ರ ಸರಕಾರ ಅತ್ಯಾಧುನಿಕವಾದ ಮಾರ್ಗೋಪಾಯಗಳನ್ನು ಮತ್ತು ತಂತ್ರಜ್ಞಾನಗಳನ್ನು ಬಳಸಲು ಚಿಂತನೆ ನಡೆಸಬೇಕೆಂದು ಕೋರುತ್ತೇನೆ.