ಮುರ್ಸಿ ಬಿಡುಗಡೆ ಮಾಡಿ : ಈಜಿಪ್ಟ್ ಜೊತೆ ಸಂಬಂಧ ವರ್ಧನೆಗೆ ಟರ್ಕಿ ಶರತ್ತು

Update: 2016-04-12 12:09 GMT

 ಇಸ್ತಾನ್ಬುಲ್, ಎ. 12: ಅಬ್ದೆಲ್ ಫತಾಹ್ ಅಲ್-ಸಿಸಿ ನೇತೃತ್ವದ ಈಜಿಪ್ಟ್ ಸರಕಾರದೊಂದಿಗೆ ಸಂಬಂಧವನ್ನು ಪುನಃಸ್ಥಾಪಿಸಬೇಕಾದರೆ, ಆ ದೇಶದ ಪದಚ್ಯುತ ಅಧ್ಯಕ್ಷ ಮುಹಮ್ಮದ್ ಮುರ್ಸಿಯನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಹಾಗೂ ಮುಸ್ಲಿಂ ಬ್ರದರ್‌ಹುಡ್ ನಾಯಕರ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕು ಸೇರಿದಂತೆ ಹಲವು ಶರತ್ತುಗಳನ್ನು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಮುಂದಿಟ್ಟಿದ್ದಾರೆ.

ಎರ್ದೊಗಾನ್ ಮುಂದಿನ ವಾರ ಸೌದಿ ಅರೇಬಿಯದ ದೊರೆ ಸಲ್ಮಾನ್ ಬಿನ್ ಅಬ್ದುಲಝೀಝ್‌ರನ್ನು ಭೇಟಿಯಾಗಲಿದ್ದಾರೆ ಹಾಗೂ ಈ ಸಂದರ್ಭದಲ್ಲಿ ಅಲ್ ಸಿಸಿ ಜೊತೆ ವ್ಯವಹರಿಸುವಂತೆ ಎರ್ದೊಗಾನ್‌ಗೆ ದೊರೆ ಸಲ್ಮಾನ್ ಹೇಳುವ ನಿರೀಕ್ಷೆಯಿದೆ ಎಂದು ಈಜಿಪ್ಟ್‌ನ ಅಂಕಣಕಾರ ಇಮಾದ್ ಅದೀಬ್ ಹೇಳಿರುವುದಾಗಿ ವೆಬ್‌ಸೈಟೊಂದು ವರದಿ ಮಾಡಿದೆ.

ಸುನ್ನಿ ವೇದಿಕೆಗೆ ಬೆಂಬಲ ನೀಡುವುದಕ್ಕಾಗಿ ಹಾಗೂ ಅಭಿವೃದ್ಧಿಯ ಪರವಾಗಿ ಮತ್ತು ಭಯೋತ್ಪಾದನೆಯ ವಿರುದ್ಧವಾಗಿ ಸಹಕಾರ ಏರ್ಪಡಿಸುವ ಉದ್ದೇಶದಿಂದ ಈ ಪ್ರಸ್ತಾಪವನ್ನು ಎರ್ದೊಗಾನ್ ಅಂಗೀಕರಿಸುವ ನಿರೀಕ್ಷೆಯಿದೆ ಎಂದು ಅದೀಬ್ ಹೇಳಿದ್ದಾರೆ.

ಮುರ್ಸಿಯ ಪದಚ್ಯುತಿಯಿಂದಾಗಿ ಎರ್ದೊಗಾನ್ ಮುಖಭಂಗ ಅನುಭವಿಸಿದ್ದಾರೆ ಎಂದು ಅಂಕಣಕಾರ ಅಭಿಪ್ರಾಯಪಡುತ್ತಾರೆ.

ಈ ಪ್ರಸ್ತಾಪಕ್ಕೆ ಎರ್ದೊಗಾನ್ ಒಪ್ಪಿದರೆ, ಬ್ರದರ್‌ಹುಡ್‌ಗೆ ನೀಡುತ್ತಿರುವ ತನ್ನ ಬೆಂಬಲವನ್ನು ಅವರು ಹಿಂದಕ್ಕೆ ಪಡೆದುಕೊಂಡಂತೆ ಹಾಗೂ ಅಲ್ ಸಿಸಿ ಸರಕಾರಕ್ಕೆ ಮಾನ್ಯತೆ ನೀಡಿದಂತೆ ಎಂದು ಅದೀಬ್ ಹೇಳುತ್ತಾರೆ.

ಮುರ್ಸಿಯನ್ನು ಬಿಡುಗಡೆ ಮಾಡಿದರೆ, ಮುಸ್ಲಿಂ ಬ್ರದರ್‌ಹುಡ್‌ಗೆ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದರೆ ಹಾಗೂ ಅದರ ನಾಯಕರು ಮತ್ತು ಸದಸ್ಯರಿಗೆ ನೀಡಲಾಗಿರುವ ಗಲ್ಲು ಶಿಕ್ಷೆಗಳನ್ನು ರದ್ದುಪಡಿಸಿದರೆ ಅಲ್ ಸಿಸಿ ಸರಕಾರದೊಂದಿಗೆ ಮಾತುಕತೆ ಪುನಾರಂಭಿಸಲು ಎರ್ದೊಗಾನ್ ಒಪ್ಪುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News