ಪ್ಯಾರಿಸ್ ದಾಳಿಯ ಸೂತ್ರಧಾರನ ಮಾಹಿತಿ ನೀಡಿದ್ದೇ ಮುಸ್ಲಿಂ ಮಹಿಳೆ
ಪ್ಯಾರಿಸ್, ಎ. 12: ಕಳೆದ ವರ್ಷದ ನವೆಂಬರ್‌ನಲ್ಲಿ ಭಯೋತ್ಪಾದಕರು ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆಸಿದ ಭೀಕರ ರಕ್ತದೋಕುಳಿಯಲ್ಲಿ ಕನಿಷ್ಠ 130 ಮಂದಿ ಅಮಯಾಕರು ಪ್ರಾಣ ಕಳೆದುಕೊಂಡರು. ಈ ದಾಳಿಯ ರೂವಾರಿಯೆನ್ನಲಾದ ಅಬ್ದುಲ್ ಹಮೀದ್ ಅಬ್ಬಾವುದ್ ಎಂಬಾತನನ್ನು ಫ್ರಾನ್ಸ್ ಪೊಲೀಸರು ಕೆಲವು ದಿನಗಳ ಬಳಕ ಹತ್ಯೆಗೈದರು. ಪ್ಯಾರಿಸ್ ನಗರದ ಉಪನಗರವೊಂದರ ಅಪಾರ್ಟ್‌ಮೆಂಟೊಂದಕ್ಕೆ ದಾಳಿ ನಡೆಸಿದ ಪೊಲೀಸರು ಈ ಕಾರ್ಯಾಚರಣೆ ನಡೆಸಿದರು. ಈ ಮಹತ್ವದ ಕಾರ್ಯಾಚರಣೆ ನಡೆಸಲು ಪೊಲೀಸರಿಗೆ ಮಾಹಿತಿ ನೀಡಿದ್ದು ಯಾರು ಗೊತ್ತೇ? ಓರ್ವ ಮುಸ್ಲಿಂ ಮಹಿಳೆ.
ಅಬ್ಬಾವುದ್‌ನ ಸೋದರ ಸಂಬಂಧಿ ಮಹಿಳೆ ಹಸ್ನಾ ಐತ್‌ಬೌಲಾಸನ್‌ನ ಜೊತೆ ಈ ಮಹಿಳೆ ಪ್ಯಾರಿಸ್ ದಾಳಿ ನಡೆದ ಎರಡು ದಿನಗಳ ಬಳಿಕ ಅಬ್ಬಾವುದ್‌ನನ್ನು ಭೇಟಿಯಾದರು. ತಾನು ಯಾರನ್ನು ಭೇಟಿಯಾಗಲು ಹೋಗುತ್ತಿದ್ದೇನೆ ಎನ್ನುವ ಕಲ್ಪನೆ ಈ ಮಹಿಳೆಗೆ ಇರಲಿಲ್ಲ ಎನ್ನಲಾಗಿದೆ. ತನ್ನ ಸೋದರ ಸಂಬಂಧಿಯನ್ನು ಭೇಟಿಯಾದ ಸಂತೋಷದಲ್ಲಿ ಐತ್‌ಬೌಲಾಸನ್ ಇದ್ದರೆ, ಅಬ್ಬಾವುದ್‌ನನ್ನು ನೋಡಿದ ಈ ಮಹಿಳೆಗೆ ಆಘಾತವಾಗಿತ್ತು. ಆತ ಐಸಿಸ್ ಉಗ್ರ ಎನ್ನುವುದು ಈ ಮಹಿಳೆಗೆ ತಕ್ಷಣ ಗೊತ್ತಾಯಿತು. ತಾನು ಟಿವಿಯಲ್ಲಿ ನೋಡಿದ್ದ ವೀಡಿಯೊಗಳಿಂದ ಆಕೆಗೆ ಈ ವಿಷಯ ಗೊತ್ತಾಯಿತು.
ಆ ಸಮಯದಲ್ಲಿ ಐತ್‌ಬೌಲಾಸನ್ ಮಾದಕ ದ್ರವ್ಯ ನಿಗ್ರಹ ಪೊಲೀಸರ ಕಣ್ಗಾವಲಿನಲ್ಲಿದ್ದಳು ಎಂದು ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ. ಇದಾದ ಬಳಿಕ, ಐತ್‌ಬೌಲಾಸನ್ ಜೊತೆಗೆ ಹೋಗಿದ್ದ ಮಹಿಳೆ ಪೊಲೀಸರನ್ನು ರಹಸ್ಯವಾಗಿ ಭೇಟಿ ಮಾಡಿ ಉಗ್ರರನ್ನು ಭೇಟಿಯಾದ ಮಾಹಿತಿಯನ್ನು ನೀಡಿದರು. ಮೂರು ದಿನಗಳ ಬಳಿಕ ಪೊಲೀಸರು ಸೇಂಟ್-ಡೆನಿಸ್ ಉಪನಗರದಲ್ಲಿನ ಆ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದರು. ನವೆಂಬರ್ 18ರಂದು ನಡೆದ ಆ ಕಾರ್ಯಾಚರಣೆಯಲ್ಲಿ ಅಬ್ಬಾವುದ್ ಮತ್ತು ಆತನ ಸೋದರ ಸಂಬಂಧಿ ಮಹಿಳೆ ಐತ್‌ಬೌಲಾಸನ್ ಹತನಾದರು.
‘‘ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದ ನಾನೂ ಓರ್ವ ಮುಸ್ಲಿಮ್ ಎಂಬುದನ್ನು ಜಗತ್ತು ತಿಳಿಯಬೇಕಾಗಿದೆ’’ ಎಂದು ‘ವಾಶಿಂಗ್ಟನ್ ಪೋಸ್ಟ್’ಗೆ ನೀಡಿದ ಸಂದರ್ಶನವೊಂದರಲ್ಲಿ ಈ ಮಹಿಳೆ ಹೇಳಿದ್ದಾರೆ. ‘‘ಅಬ್ಬಾವುದ್ ಮತ್ತು ಇತರರು ಮಾಡಿರುವುದು ಇಸ್ಲಾಮ್ ಬೋಧಿಸಿರುವುದನ್ನಲ್ಲ ಎಂಬುದನ್ನೂ ಜನರು ತಿಳಿಯಬೇಕೆಂದು ನಾನು ಬಯಸುತ್ತೇನೆ’’ ಎಂದು ಅವರು ಹೇಳಿದರು.
ಇನ್ನೊಂದು ದಾಳಿಯನ್ನೂ ತಪ್ಪಿಸಿದರು
ಇಬ್ಬರು ಮಹಿಳೆಯರು ಅಬ್ಬಾವುದ್‌ನನ್ನು ಆತನ ಅಡಗುದಾಣದಲ್ಲಿ ಭೇಟಿಯಾದಾಗ ಆತ ಪ್ಯಾರಿಸ್ ಮೇಲೆ ಇನ್ನೊಂದು ದಾಳಿಗೆ ಸಿದ್ಧತೆ ನಡೆಸುತ್ತಿದ್ದನು ಎಂಬ ಮಾಹಿತಿಯನ್ನೂ ಈ ಮಹಿಳೆ ಪೊಲೀಸರಿಗೆ ನೀಡಿದ್ದರು. ಡಝನ್‌ಗಟ್ಟಳೆ ಐಸಿಸ್ ಉಗ್ರರು ನಿರಾಶ್ರಿತರ ಸೋಗಿನಲ್ಲಿ ಯುರೋಪ್‌ಗೆ ಬಂದಿದ್ದಾರೆ ಎಂಬ ಮಾಹಿತಿಯನ್ನು ಆತ ಈ ಮಹಿಳೆಯರೊಂದಿಗೆ ಹಂಚಿಕೊಂಡಿದ್ದನು.