ವೃದ್ಧ ದಂಪತಿಗಾಗಿ ವಿಮಾನ ನಿಲ್ಲಿಸಿದ ಇತ್ತಿಹಾದ್ ಪೈಲಟ್ !
ಮ್ಯಾಂಚೆಸ್ಟರ್ , ಎ.12: ಇತ್ತಿಹಾದ್ ವಿಮಾನದ ಪೈಲಟ್ ಒಬ್ಬನ ಅಸಾಧಾರಣ ಮಾನವೀಯ ಸೇವೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಆಸ್ಪತ್ರೆಯಲ್ಲಿ ಮರಣ ಶಯ್ಯೆಯಲ್ಲಿದ್ದ ಮೊಮ್ಮಗನನ್ನು ಅಜ್ಜ ಅಜ್ಜಿ ಹೋಗಿ ಸೇರಲಿಕ್ಕಾಗಿ ಈ ಪೈಲಟ್ ರನ್ ವೇಯಲ್ಲಿ ವಿಮಾನವನ್ನು ನಿಲ್ಲಿಸಿದ್ದರು.
ವೃದ್ಧ ದಂಪತಿಯೊಂದು ಅಬುಧಾಬಿ ಮಾರ್ಗವಾಗಿ ಆಸ್ಟ್ರೇಲಿಯಕ್ಕೆ ಹೊರಟಿದ್ದರು. ವಿಮಾನ ರನ್ ವೇ ಯಲ್ಲಿ ಹೊರಡುವಾಗ ಇನ್ನೇನು ತಮ್ಮ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಲು ಹೊರಟಾಗ ದಂಪತಿಗೆ ತಮ್ಮ ಅಳಿಯನಿಂದ ಸಂದೇಶವೊಂದು ಬಂತು.
ತಕ್ಷಣ ಅಳಿಯನಿಗೆ ಕರೆ ಮಾಡಿ ನಮ್ಮ ವಿಮಾನ ಹೊರಟಿದೆ ಎಂದು ಹೇಳಲು ಹೊರಡುವಾಗಲೇ ಅಲ್ಲಿಂದ ಅವರ ಮೊಮ್ಮಗನನ್ನು ಆಸ್ಪತ್ರೆಯ ತೀವ್ರ ನಿಗಾಕ್ಕೆ ತೆಗೆದುಕೊಂಡು ಹೋದ ವಿಷಯ ತಿಳಿಯಿತು. ತಕ್ಷಣ ದಂಪತಿ ಕ್ಯಾಬಿನ್ ಸಿಬ್ಬಂದಿಗೆ ವಿಷಯ ತಿಳಿಸಿದರು. ಆಗಲೇ ವಿಮಾನ ರನ್ ವೇಯಲ್ಲಿ ಹೊರತಾಗಿತ್ತು. ಸಿಬ್ಬಂದಿ ತಕ್ಷಣ ಪೈಲಟ್ ಗೆ ವಿಷಯ ತಲುಪಿಸಿದರು.
ಆಗ ಬೇರೇನೂ ಯೋಚಿಸದೆ ಮಾನವೀಯತೆ ಮೆರೆದ ಪೈಲಟ್ ವಿಮಾನ ನಿಲ್ಲಿಸಿ ಮತ್ತೆ ಗೇಟ್ ಗೆ ಹಿಂದುರುಗಿದ. ಕ್ಯಾಬಿನ್ ಸಿಬ್ಬಂದಿ ವೃದ್ಧ ದಂಪತಿಯನ್ನು ಕೆಳಗಿಳಿಸಿ ಅವರು ಕೂಡಲೇ ಕಾರ್ ಮೂಲಕ ಆಸ್ಪತ್ರೆಗೆ ತಲುಪಲು ಸಹಕರಿಸಿದರು.
ದಂಪತಿ ಆಸ್ಪತ್ರೆ ತಲುಪಿದ ಮರುದಿನವೇ ಅವರ ಮೊಮ್ಮಗ ಮೃತಪಟ್ಟಿದ್ದಾನೆ. ಪೈಲಟ್ ನ ಸಮಯ ಪ್ರಜ್ಞೆ ಹಾಗು ಮಾನವೀಯತೆಯಿಂದ ದಂಪತಿ ತಮ್ಮ ಮೊಮ್ಮಗನ ಕೊನೆ ಗಳಿಗೆಯಲ್ಲಿ ಅವನೊಂದಿಗೆ ಕಳೆಯಲು ಸಾಧ್ಯವಾಯಿತು ಎಂದು ಈ ಇಡೀ ಪ್ರಕರಣವನ್ನು ಜಗತ್ತಿನ ಗಮನಕ್ಕೆ ತಂದ ಬೆಕಿ ಸ್ಟೀಫ಼ನ್ಸನ್ ಹೇಳಿದ್ದಾರೆ.