ಸಿರಿಯದಲ್ಲಿ ರಶ್ಯ ಹೆಲಿಕಾಪ್ಟರ್ ಪತನ: 2 ಪೈಲಟ್‌ಗಳ ಸಾವು
Update: 2016-04-12 20:38 IST
ಮಾಸ್ಕೋ, ಎ. 12: ಮಧ್ಯ ಸಿರಿಯದ ನಗರ ಹಾಮ್ಸ್ ಸಮೀಪ ರಶ್ಯ ಸೇನೆಯ ಹೆಲಿಕಾಪ್ಟರೊಂದು ಪತನಗೊಂಡಿದ್ದು, ಇಬ್ಬರು ಪೈಲಟ್‌ಗಳು ಸಾವಿಗೀಡಾಗಿದ್ದಾರೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ. ಆದಾಗ್ಯೂ, ಹೆಲಿಕಾಪ್ಟರ್ ಮೇಲೆ ದಾಳಿ ನಡೆದಿಲ್ಲ ಎಂದು ಅದು ಹೇಳಿದೆ.
ಎಂಐ-28 ದಾಳಿ ಹೆಲಿಕಾಪ್ಟರ್ ಮಂಗಳವಾರ ಮುಂಜಾವಿನ ವೇಳೆ ಪತನಗೊಂಡಿತು ಎಂದು ಸಚಿವಾಲಯ ಹೇಳಿದೆ. ಪೈಲಟ್‌ಗಳ ಮೃತ ದೇಹಗಳನ್ನು ಪತ್ತೆಹಚ್ಚಲಾಗಿದ್ದು ರಶ್ಯದ ಹಮೈಮಿಮ್ ವಾಯು ನೆಲೆಗೆ ತರಲಾಗಿದೆ ಎಂದಿದೆ.
‘‘ಅಪಘಾತ ಸ್ಥಳದಿಂದ ದೊರೆತ ಮಾಹಿತಿಯ ಪ್ರಕಾರ, ಹೆಲಿಕಾಪ್ಟರ್ ಮೇಲೆ ದಾಳಿ ನಡೆಸಲಾಗಿಲ್ಲ’’ ಎಂದು ಹೇಳಿರುವ ಸಚಿವಾಲಯ, ಅಪಘಾತದ ಕಾರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು. ಇದರೊಂದಿಗೆ ಸಿರಿಯ ಕಾರ್ಯಾಚರಣೆಯಲ್ಲಿ ಮಡಿದ ರಶ್ಯದ ಸೈನಿಕರ ಸಂಖ್ಯೆ ಏಳಕ್ಕೆ ಏರಿದಂತಾಗಿದೆ.