ರಾತ್ರಿವೇಳೆ ಸಿಡಿಮದ್ದು ಪ್ರದರ್ಶನಕ್ಕೆ ಹೈಕೋರ್ಟ್ ನಿಷೇಧ
ತಿರುವನಂತಪುರ, ಎ.12: ರಾಜ್ಯದ ದೇವಾಲಯ ಗಳಲ್ಲಿ ರಾತ್ರಿ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಶಬ್ದ ಮಾಡುವ ಸಿಡಿಮದ್ದು ಪ್ರದರ್ಶನವನ್ನು ಕೇರಳ ಹೈಕೋರ್ಟ್ ನಿಷೇಧಿಸಿದೆ. ಈ ಸಂಬಂಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ಮೇಲೆ ಮಂಗಳವಾರ ಅದು ಈ ತೀರ್ಪು ನೀಡಿದೆ.
ಕೊಲ್ಲಂ ಜಿಲ್ಲೆಯ ಪುಟ್ಟಿಂಗಲ್ ದೇವಾಲಯದ ಸಂಕೀರ್ಣದಲ್ಲಿ ರವಿವಾರ 111 ಮಂದಿಯ ಸಾವು ಹಾಗೂ 300ಕ್ಕೂ ಹೆಚ್ಚು ಮಂದಿ ಗಾಯಗೊಳ್ಳಲು ಕಾರಣವಾದ ಮಾರಕ ಬೆಂಕಿ ಅನಾಹುತದ ಬಳಿಕ ಹೈಕೋರ್ಟ್‌ನ ಈ ಆದೇಶ ಹೊರ ಬಿದ್ದಿದೆ. ದುರಂತದ ಕುರಿತು ಉಮ್ಮನ್ ಚಾಂಡಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಹೈಕೋರ್ಟ್, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಸಲಹೆ ನೀಡಿದೆ.
ದೇವಾಲಯ ಸಂಕೀರ್ಣದೊಳಗೆ ಸಿಡಿಮದ್ದು ಸಿಡಿಸಲು ತಾನು ಅನುಮತಿ ನೀಡಿರಲಿಲ್ಲವೆಂಬ ರಾಜ್ಯ ಸರಕಾರದ ಪ್ರತಿಪಾದನೆಗೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಅನುಮತಿಯ ಹೊರತಾಗಿ ಸಿಡಿಮದ್ದು ಪ್ರದರ್ಶನ ಹೇಗೆ ನಡೆಯಿತೆಂದು ಪ್ರಶ್ನಿಸಿತು.ಮನವಿಯನ್ನು ಆಲಿಸುತ್ತಿದ್ದ ನ್ಯಾಯಾಲಯ, ದುರಂತಕ್ಕೆ ದೇವಳದ ಅಧಿಕಾರಿಗಳಲ್ಲದೆ ಕಂದಾಯ ಇಲಾಖೆಯೂ ಹೊಣೆಯೆಂದು ಆರೋಪಿಸಿತು.
ಸಿಡಿಮದ್ದು ದುರಂತದಲ್ಲಿ ಗಾಯಗೊಂಡವರಿಗೆ ಧರ್ಮಾರ್ಥ ಚಿಕಿತ್ಸೆ ಒದಗಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿರುವ ಹೈಕೋರ್ಟ್, ಈ ವಿಷಯದಲ್ಲಿ ಪ್ರತ್ಯೇಕ ಅಫಿದಾವಿತ್‌ಗಳನ್ನು ಸಲ್ಲಿಸುವಂತೆ ಪೊಲೀಸ್ ಹಾಗೂ ಜಿಲ್ಲಾಡಳಿತಗಳಿಗೆ ಆದೇಶ ನೀಡಿದೆ. ದುರ್ಘಟನೆ ಸಂಭವಿಸಿದ ಬಳಿಕ ಜಿಲ್ಲಾಡಳಿತವು, ತಾನು ಸಿಡಿಮದ್ದು ಪ್ರದರ್ಶನ ನಡೆಸಲು ದೇವಾಲಯದ ಆಡಳಿತಕ್ಕೆ ಅನುಮತಿ ನಿರಾಕರಿಸಿದ್ದೆನೆಂದು ಸ್ಪಷ್ಟಪಡಿಸಿತ್ತು.
13 ಮಂದಿಯ ಬಂಧನ
ಕೊಲ್ಲಂ, ಎ.12: ಇಲ್ಲಿನ ಪುಟ್ಟಿಂಗಲ್ ದೇವಾಲಯದಲ್ಲಿ 111 ಮಂದಿಯ ಸಾವಿಗೆ ಕಾರಣವಾದ ಸಿಡಿಮದ್ದು ಪ್ರದರ್ಶನದ ಬೆಂಕಿ ಅನಾಹುತದ ಸಂಬಂಧ ದೇವಾಲಯದ ಆಡಳಿತ ಮಂಡಳಿಯ ಸದಸ್ಯರೂ ಸೇರಿದಂತೆ 13 ಮಂದಿಯನ್ನು ಇಂದು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಲ್ಲಿ ಆಡಳಿತ ಮಂಡಳಿಯ 7 ಸದಸ್ಯರು ಹಾಗೂ ಸಿಡಿಮದ್ದು ಪ್ರದರ್ಶನದ ಇಬ್ಬರು ಗುತ್ತಿಗೆದಾರರ 6 ಮಂದಿ ಕೆಲಸಗಾರರು ಸೇರಿದ್ದಾರೆ. ದೀರ್ಘಕಾಲದ ವಿಚಾರಣೆಯ ಬಳಿಕ ಅವರನ್ನು ಬಂಧಿಸಲಾಗಿದೆಯೆಂದು ಮೂಲಗಳು ಹೇಳಿವೆ.
ನಾಟಕೀಯ ನಡೆಯೊಂದರಲ್ಲಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಜಯಲಾಲ್, ಕಾರ್ಯದರ್ಶಿ ಕೆ. ಕೃಷ್ಣನ್‌ಕುಟ್ಟಿ ಹಾಗೂ ಸದಸ್ಯರಾದ ಶಿವಪ್ರಸಾದ್, ಸುರೇಂದ್ರನ್ ಪಿಳ್ಳೈ, ರವೀಂದ್ರನ್ ಪಿಳ್ಳೈ ಎಂಬವರು ಇಂದು ನಸುಕಿನ ವೇಳೆ ಕ್ರೈಂ ಬ್ರಾಂಚ್ ಪೊಲೀಸರ ಮುಂದೆ ಶರಣಾಗಿದ್ದಾರೆ. ಸುರೇಂದ್ರನಾಥನ್ ಪಿಳ್ಳೈ ಹಾಗೂ ಮುರುಗೇಶನ್ ಎಂಬಿಬ್ಬರು ಸದಸ್ಯರನ್ನು ಇಂದು ಮುಂಜಾನೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.ದುರಂತದ ಬಳಿಕ, ಇಬ್ಬರು ಗುತ್ತಿಗೆದಾರರ 6 ಮಂದಿ ಕೆಲಸಗಾರರನ್ನು ಸಹ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.ದುರ್ಘಟನೆಯ ಕುರಿತು ಕ್ರೈಂ ಬ್ರಾಂಚ್‌ನ ತನಿಖೆ ಪ್ರಗತಿಯಲ್ಲಿದೆ.ದೇವಾಲಯದ ಆಡಳಿತ ಮಂಡಳಿಯ ವಿರುದ್ಧ ಕೊಲೆ ಯತ್ನ, ಅನುದ್ದೇಶಿತ ಮಾನವ ಹತ್ಯೆ ಮತ್ತಿತರ ಆರೋಪಗಳನ್ವಯ ಪ್ರಕರಣ ದಾಖಲಿಸಿರುವ ಅಪರಾಧ ವಿಭಾಗವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ.