×
Ad

ಟ್ವೆಂಟಿ-20 ಕ್ರಿಕೆಟ್: ಬ್ರಾವೊ ವಿಶ್ವ ದಾಖಲೆ

Update: 2016-04-12 23:04 IST

300 ವಿಕೆಟ್ ಪೂರೈಸಿದ ವಿಂಡೀಸ್ ಆಲ್‌ರೌಂಡರ್

  ಹೊಸದಿಲ್ಲಿ, ಎ.12: ವೆಸ್ಟ್‌ಇಂಡೀಸ್‌ನ ಆಲ್‌ರೌಂಡರ್ ಡ್ವೇಯ್ನ್ ಬ್ರಾವೊ ಟ್ವೆಂಟಿ-20 ಕ್ರಿಕೆಟ್‌ನ ನೈಜ ಚಾಂಪಿಯನ್ ಎಂದು ತೋರಿಸಿಕೊಟ್ಟಿದ್ದಾರೆ. 2016ರ ಐಪಿಎಲ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡದ ವಿರುದ್ದ 22 ರನ್‌ಗೆ 4 ವಿಕೆಟ್ ಉರುಳಿಸಿದ ಬ್ರಾವೊ ಟ್ವೆಂಟಿ-20 ಕ್ರಿಕೆಟ್ ಇತಿಹಾಸದಲ್ಲಿ 300 ವಿಕೆಟ್‌ಗಳನ್ನು ಉರುಳಿಸಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಬ್ರಾವೊ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಮೊಹಾಲಿಯಲ್ಲಿ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸ್ಲೋ ಯಾರ್ಕರ್‌ನ ಮೂಲಕ ಪಂಜಾಬ್‌ನ ನಾಯಕ ಡೇವಿಡ್ ಮಿಲ್ಲರ್(15) ವಿಕೆಟ್ ಉಡಾಯಿಸಿದ್ದ ಬ್ರಾವೊ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 300 ವಿಕೆಟ್ ಪೂರೈಸಿದರು.

ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಈ ಹಿಂದೆ 221 ಪಂದ್ಯಗಳಲ್ಲಿ 299 ವಿಕೆಟ್ ಪಡೆದು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದರು. 292ನೆ ಪಂದ್ಯದಲ್ಲಿ 302ನೆ ವಿಕೆಟ್ ಪಡೆದ ಬ್ರಾವೊ ಅವರು ಮಾಲಿಂಗರ ದಾಖಲೆಯನ್ನು ಮುರಿದರು. ಗರಿಷ್ಠ ವಿಕೆಟ್ ಪಡೆದ ಟ್ವೆಂಟಿ-20 ಬೌಲರ್‌ಗಳ ಪಟ್ಟಿಯಲ್ಲಿ ಬ್ರಾವೊ ಮೊದಲ ಸ್ಥಾನದಲ್ಲಿದ್ದರೆ, ಮಾಲಿಂಗ ಎರಡನೆ ಹಾಗೂ ಪಾಕಿಸ್ತಾನದ ಯಾಸಿರ್ ಅರಾಫತ್(217 ಪಂದ್ಯ, 277 ವಿಕೆಟ್) ಮೂರನೆ ಸ್ಥಾನದಲ್ಲಿದ್ದಾರೆ.

ಬ್ರಾವೊ ಸಾಧನೆಯ ಇಣುಕು ನೋಟ...

-ಬ್ರಾವೊ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ಪಂದ್ಯಗಳನ್ನು ಆಡಿರುವ ಎರಡನೆ ಆಟಗಾರ. ಬ್ರಾವೊರ ಸಹ ಆಟಗಾರ, ಕೀರನ್ ಪೊಲಾರ್ಡ್ 300 ಪಂದ್ಯಗಳನ್ನು ಆಡಿದ್ದಾರೆ.

-ಟ್ವೆಂಟಿ-20 ಕ್ರಿಕೆಟ್‌ನಲ್ಲಿ 250ಕ್ಕೂ ಅಧಿಕ ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಬ್ರಾವೊ ಕನಿಷ್ಠ ಸರಾಸರಿ ಹೊಂದಿದ್ದಾರೆ. ಮಾಲಿಂಗ ಶ್ರೇಷ್ಠ ಸರಾಸರಿ(18.08) ಹೊಂದಿದ್ದಾರೆ.

-ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಬ್ರಾವೊ ಏಳನೆ ಬಾರಿ ನಾಲ್ಕು ವಿಕೆಟ್ ಗೊಂಚಲು ಪಡೆದರು. ಈ ಮೂಲಕ ಆಸ್ಟ್ರೇಲಿಯದ ಡರ್ಕ್ ನ್ಯಾನೆಸ್ ದಾಖಲೆ ಸರಿಗಟ್ಟಿದರು. ಸುನೀಲ್ ನರೇನ್ ಹಾಗೂ ಯಾಸಿರ್ ಅರಾಫತ್ ತಲಾ 10 ಬಾರಿ 4 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಉಮರ್ ಗುಲ್ ಹಾಗೂ ಮಾಲಿಂಗ 8 ಬಾರಿ 4 ವಿಕೆಟ್ ಗೊಂಚಲು ಪಡೆದಿದ್ದಾರೆ.

-ಬ್ರಾವೊ ಐಪಿಎಲ್ ಇತಿಹಾಸದಲ್ಲಿ 100ಕ್ಕೂ ಅಧಿಕ ವಿಕೆಟ್ ಪಡೆದ ಎರಡನೆ ಬೌಲರ್. ಬ್ರಾವೊ 92 ಪಂದ್ಯಗಳಲ್ಲಿ 109 ವಿಕೆಟ್ ಪಡೆದಿದ್ದಾರೆ. ಮಾಲಿಂಗ 98 ಪಂದ್ಯಗಳಲ್ಲಿ 143 ವಿಕೆಟ್‌ಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News