ಐಪಿಎಲ್: ಇಂದು ಮುಂಬೈ-ಕೋಲ್ಕತಾ ಮುಖಾಮುಖಿ
ಕೋಲ್ಕತಾ, ಎ.12: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಬುಧವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮುಖಾಮುಖಿಯಾಗಲಿದೆ.
ಕೋಲ್ಕತಾ ತಂಡ ಇಲ್ಲಿನ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಎ.10 ರಂದು ನಡೆದ ಡೆಲ್ಲಿ ವಿರುದ್ಧದ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡು ಶುಭಾರಂಭ ಮಾಡಿತ್ತು. ಆ ಪಂದ್ಯದಲ್ಲಿ ಆಸ್ಟ್ರೇಲಿಯದ ಹಿರಿಯ ವೇಗದ ಬೌಲರ್ ಬ್ರಾಡ್ ಹಾಗ್ 19 ರನ್‌ಗೆ 3 ವಿಕೆಟ್‌ಗಳನ್ನು ಉರುಳಿಸಿ ಗಮನ ಸೆಳೆದಿದ್ದರು.
ನಾಯಕ ಗೌತಮ್ ಗಂಭೀರ್ ಹಾಗೂ ರಾಬಿನ್ ಉತ್ತಪ್ಪ ತಂಡಕ್ಕೆ ಮತ್ತೊಮ್ಮೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಮುಂಬೈ ತಂಡ ಎ.9 ರಂದು ತನ್ನ ತವರು ಮೈದಾನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಎಂಎಸ್ ಧೋನಿ ನೇತೃತ್ವದ ಪುಣೆ ತಂಡದ ವಿರುದ್ಧ ಸೋಲುವ ಮೂಲಕ ಟೂರ್ನಿಯಲ್ಲಿ ಕಳಪೆ ಆರಂಭ ಪಡೆದಿತ್ತು.
ಪುಣೆ ಬೌಲರ್‌ಗಳ ದಾಳಿ ಎದುರಿಸಲು ವಿಫಲವಾಗಿದ್ದ ಮುಂಬೈ ಕನಿಷ್ಠ ಮೊತ್ತಕ್ಕೆ ಆಲೌಟಾಗಿತ್ತು. ನಾಯಕ ರೋಹಿತ್ ಶರ್ಮ, ಟ್ವೆಂಟಿ-20 ವಿಶ್ವಕಪ್‌ನಲ್ಲಿ ವಿಂಡೀಸ್ ಪರ ಮಿಂಚಿದ್ದ ಸಿಮನ್ಸ್ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದರು.
ತಂಡಕ್ಕೆ ವಾಪಸಾಗಿರುವ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್ ನೀಡಿರಲಿಲ್ಲ. ಮುಂಬೈನ ಹಿರಿಯ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಸ್ಪಿನ್ ಸ್ನೇಹಿ ಈಡನ್ ಪಿಚ್‌ನಲ್ಲಿ ಮಿಂಚಲು ಎದುರು ನೋಡುತ್ತಿದ್ದಾರೆ. ಹರ್ಭಜನ್ ಕೋಲ್ಕತಾದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಪಂದ್ಯದ ಸಮಯ: ರಾತ್ರಿ 8:00