×
Ad

ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಸುನೀಲ್ ಅವಳಿ ಗೋಲು

Update: 2016-04-12 23:08 IST

ಸುಲ್ತಾನ್ ಅಝ್ಲಾನ್ ಷಾ ಹಾಕಿ ಟೂರ್ನಿ

 ಇಪೋ(ಮಲೇಷ್ಯಾ), ಎ.12: ‘ಕೊಡಗಿನ ಕುವರ’ ಎಸ್.ವಿ. ಸುನೀಲ್ ಬಾರಿಸಿದ ಅವಳಿ ಗೋಲಿನ ನೆರವಿನಿಂದ ಭಾರತ ತಂಡ ಇಲ್ಲಿ ನಡೆಯುತ್ತಿರುವ 25ನೆ ಆವೃತ್ತಿಯ ಸುಲ್ತಾನ್ ಅಝ್ಲಾನ್ ಷಾ ಹಾಕಿ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 5-1 ಗೋಲುಗಳ ಅಂತರದಿಂದ ಮಣಿಸಿದೆ.

ಭಾರತ ತಂಡ ನಾಲ್ಕು ಗೋಲುಗಳನ್ನು ಫೀಲ್ಡ್‌ನಲ್ಲೇ ದಾಖಲಿಸಿದರೆ, ಒಂದು ಗೋಲನ್ನು ಪೆನಾಲ್ಟಿ ಕಾರ್ನರ್ ಮೂಲಕ ಗಳಿಸಿದ್ದು ಈ ಪಂದ್ಯದ ವಿಶೇಷವಾಗಿತ್ತು. ಕೆನಡಾ ವಿರುದ್ಧ ಕಳೆದ ಪಂದ್ಯವನ್ನು ಕಷ್ಟದಿಂದ ಗೆದ್ದುಕೊಂಡಿರುವ ಭಾರತ ತಂಡ ಪಾಕ್ ವಿರುದ್ಧದ ಪಂದ್ಯದಲ್ಲಿ ಒಗ್ಗಟ್ಟಿನ ಪ್ರದರ್ಶನ ನೀಡಿ ಗಮನ ಸೆಳೆಯಿತು.

ಸುನೀಲ್ ಎರಡು ಗೋಲುಗಳನ್ನು ಬಾರಿಸಿದರೆ, ಮಿಡ್‌ಫೀಲ್ಡರ್ ಮನ್‌ಪ್ರೀತ್ ಸಿಂಗ್, ಡ್ರಾಗ್-ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಹಾಗೂ ಸ್ಟ್ರೈಕರ್ ತಲ್ವಿಂದರ್ ಸಿಂಗ್ ತಲಾ 1 ಗೋಲು ಬಾರಿಸಿದ್ದಾರೆ. ಪಾಕ್ ಪರವಾಗಿ ಮುಹಮ್ಮದ್ ಇರ್ಫಾನ್ ಏಕೈಕ ಗೋಲು ಬಾರಿಸಿದ್ದರು.

ಈ ಗೆಲುವಿನ ಮೂಲಕ ಭಾರತ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನ ಪಡೆದಿದೆ. ಪಾಕಿಸ್ತಾನ 6ನೆ ಸ್ಥಾನಕ್ಕೆ ಕುಸಿದಿದೆ. ಮನ್‌ಪ್ರೀತ್ ಸಿಂಗ್ ನಾಲ್ಕನೆ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರು. 7ನೆ ನಿಮಿಷದಲ್ಲಿ ಗೋಲು ಬಾರಿಸಿದ ಪಾಕಿಸ್ತಾನದ ಇರ್ಫಾನ್ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು. 10ನೆ ನಿಮಿಷದಲ್ಲಿ ಗೋಲು ಬಾರಿಸಿದ ಸುನೀಲ್ ಭಾರತಕ್ಕೆ ಮತ್ತೊಮ್ಮೆ ಮುನ್ನಡೆ ಒದಗಿಸಿಕೊಟ್ಟರು. ಮೊದಲಾರ್ಧದಲ್ಲಿ ಭಾರತ 2-1 ಮುನ್ನಡೆ ಸಾಧಿಸಿತು.

ಸುನೀಲ್ 41ನೆ ನಿಮಿಷದಲ್ಲಿ ನಿಕ್ಕಿನ್ ತಿಮ್ಮಯ್ಯ ನೀಡಿದ ಸೂಪರ್ಬ್ ಪಾಸ್‌ನ ನೆರವಿನಿಂದ ಮತ್ತೊಂದು ಗೋಲು ಬಾರಿಸಿ ಭಾರತದ ಮುನ್ನಡೆಯನ್ನು 3-1ಕ್ಕೆ ಏರಿಸಿದರು. 50ನೆ ನಿಮಿಷದಲ್ಲಿ ಗೋಲು ಬಾರಿಸಿದ ತಲ್ವಿಂದರ್ ಸಿಂಗ್ ಭಾರತಕ್ಕೆ ಮುನ್ನಡೆಯನ್ನು 4-1ಕ್ಕೆ ಹೆಚ್ಚಿಸಿದರು. 54ನೆ ನಿಮಿಷದಲ್ಲಿ ಗೋಲು ಬಾರಿಸಿದ ರೂಪಿಂದರ್ ಭಾರತಕ್ಕೆ 5-1 ಅಂತರದ ಭರ್ಜರಿ ಗೆಲುವು ದಾಖಲಿಸಲು ನೆರವಾದರು.

ಭಾರತ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ನ್ಯೂಝಿಲೆಂಡ್ ತಂಡವನು ್ನಎದುರಿಸಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News