×
Ad

ಈ ವರ್ಷ ಸರಾಸರಿಗಿಂತ ಹೆಚ್ಚು ಮಳೆ: ಹವಾಮಾನ ಇಲಾಖೆ

Update: 2016-04-12 23:18 IST

ಹೊಸದಿಲ್ಲಿ, ಎ.12: ಈ ವರ್ಷ ಮುಂಗಾರು ಮಳೆಯು ಸರಾಸರಿಗಿಂತ ಹೆಚ್ಚಾಗುವ ನಿರೀಕ್ಷೆಯಿದೆಯೆಂದು ಹವಾಮಾನ ಇಲಾಖೆಯ ಹಿರಿಯಾಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಸತತ ಎರಡು ವರ್ಷಗಳಿಂದ ಬರದಿಂದ ಕಂಗೆಟ್ಟಿರುವ ರೈತರಿಗೆ ಇದು ಒಂದಿಷ್ಟು ಸಾಂತ್ವನ ನೀಡಲಿದೆ.

2016ರಲ್ಲಿ ಮಳೆಯ ಪ್ರಮಾಣವು ದೀರ್ಘಕಾಲೀನ ಸರಾಸರಿಯ ಶೇ.106ರಷ್ಟು ಇರಲಿದೆಯೆಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿ ಹೇಳಿದ್ದಾರೆ.
ಎಲ್‌ನಿನೊ ಹವಾಮಾನ ಮಾದರಿಯು ನಿಧಾನವಾಗಿ ದುರ್ಬಲಗೊಂಡು ಲಾನಿನಾ ಮಾದರಿಗೆ ದಾರಿ ಮಾಡುವುದರಿಂದ ಈ ವರ್ಷ ಸರಾಸರಿಗಿಂತ ಹೆಚ್ಚು ಮುಂಗಾರು ಮಳೆಯಾಗುವ ಸಾಧ್ಯತೆಯಿದೆಯೆಂದು ಅವರು ತಿಳಿಸಿದ್ದಾರೆ. ಈ ವರ್ಷ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸುರಿಯಲಿದೆಯೆಂದು ಐಎಂಡಿಯ ಮಹಾನಿರ್ದೇಶಕ ಲಕ್ಷ್ಮಣ ಸಿಂಗ್ ರಾಥೋರ್ ಹೇಳಿದ್ದಾರೆ.

ಪೆಸಿಫಿಕ್‌ನಲ್ಲಿ ಸಮುದ್ರ ಪಾತಳಿಯ ಉಷ್ಣತೆ ಹೆಚ್ಚಾಗುವಿಕೆ ಅಥವಾ ಎಲ್‌ನಿನೋ ಏಶ್ಯ ಹಾಗೂ ಪೂರ್ವ ಆಫ್ರಿಕಗಳಲ್ಲಿ ಸುಡು ಬಿಸಿಲಿಗೆ ಕಾರಣವಾಗಬಹುದು. ಆದರೆ, ದಕ್ಷಿಣ ಅಮೆರಿಕದಲ್ಲಿ ಭಾರೀ ಮಳೆ ಹಾಗೂ ಪ್ರವಾಹ ಉಂಟಾಗಬಹುದು.

ಜುಲೈಯಿಂದ ಸೆಪ್ಟಂಬರ್ ವರೆಗೆ ಸುರಿಯುವ ಮುಂಗಾರು ವಾರ್ಷಿಕ ಮಳೆಯ ಶೇ.70ರಷ್ಟನ್ನು ಸುರಿಸುತ್ತದೆ ಹಾಗೂ ನೀರಾವರಿ ಸೌಕರ್ಯದಲ್ಲಿ ಅರ್ಧದಷ್ಟು ಕೃಷಿಭೂಮಿಯನ್ನು ತೋಯಿಸುತ್ತದೆ.

ಮುಂಗಾರು ಮಳೆಯು ದೀರ್ಘಕಾಲೀನ ಸರಾಸರಿಯ ಶೇ.105ರಷ್ಟು ಬೀಳಬಹುದೆಂದು ಭಾರತದ ಏಕೈಕ ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ ಹೇಳಿದೆ. ಆದಾಗ್ಯೂ, ಸರಾಸರಿಗಿಂತ ಹೆಚ್ಚು ಮಳೆಯಾಗುವ ಸಂಭವನೀಯತೆ ಶೇ.35ರಷ್ಟೆಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News