×
Ad

ದಲಿತರ ಕೈಗೆ ಅಸ್ತ್ರ ನೀಡಿದರೆ ಇಸ್ಲಾಂ ಅತಿಕ್ರಮಣಕ್ಕೆ ತಡೆ

Update: 2016-04-13 08:36 IST

ಹೊಸದಿಲ್ಲಿ, ಎ.13: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜತೆಗಿನ ಸಾಮೀಪ್ಯ ಸಾಬೀತುಪಡಿಸಿಕೊಳ್ಳಲು ಆರೆಸ್ಸೆಸ್ ಇನ್ನಿಲ್ಲದ ಕಸರತ್ತು ನಡೆಸಿದೆ. ಇದಕ್ಕಾಗಿ ಮುಸ್ಲಿಮ್ ಅತಿಕ್ರಮಣ ಬಗ್ಗೆ ಅಂಬೇಡ್ಕರ್ ಅವರ ಅಭಿಪ್ರಾಯಗಳನ್ನು ಪ್ರಚುರಪಡಿಸಲು ಆರೆಸ್ಸೆಸ್ ಮುಂದಾಗಿದೆ.

"ಭಾರತದ ಮೇಲೆ ವಿದೇಶಿ/ ಮುಸ್ಲಿಮ್ ಅತಿಕ್ರಮಣಕ್ಕೆ ಮುಖ್ಯ ಕಾರಣವೆಂದರೆ, ದೇಶದ ಬಹುಸಂಖ್ಯಾತರಿಗೆ ಅಂದರೆ ದಲಿತರ ಕೈಗೆ ಅಸ್ತ್ರ ನೀಡದಿರುವುದು ಮತ್ತು ಅವರು ಯುದ್ಧ ಮಾಡಲು ಅವಕಾಶ ಕೊಡದಿರುವುದು. ಅಸ್ಪಶ್ಯರಿಗೆ ಶಸ್ತ್ರಾಸ್ತ್ರ ಲಭ್ಯತೆ ನಿರಾಕರಿಸದಿದ್ದರೆ, ಈ ದೇಶಕ್ಕೆ ವಿದೇಶಿ ಆಡಳಿತ ಬರುತ್ತಿರಲಿಲ್ಲ ಎಂಬುದಾಗಿ ಅಂಬೇಡ್ಕರ್ ಹೇಳಿದ್ದರು" ಎಂದು ಆರೆಸ್ಸೆಸ್ ಮುಖವಾಣಿ "ಆರ್ಗನೈಸರ್"ನ ಇತ್ತೀಚಿನ ಸಂಚಿಕೆ ಪ್ರತಿಪಾದಿಸಿದೆ.
ಕೇಸರಿ ಪಡೆ ಅಂಬೇಡ್ಕರ್ ಅವರ ಬಗ್ಗೆ ಹೊಗಳಿಕೆಯ ಸುರಿಮಳೆ ಸುರಿಸುತ್ತಿದ್ದು, ಅವರ 125ನೇ ಜಯಂತಿಯನ್ನು ದೇಶಾದ್ಯಂತ ಅದ್ದೂರಿಯಾಗಿ ಆಚರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆರ್ಗನೈಸರ್‌ನ ಮುಖಪುಟ ಲೇಖನ ಕೂಡಾ ಈ ಬಾರಿ ಇದಕ್ಕೇ ಮೀಸಲಾಗಿದ್ದು, ಭಾರತೀಯ ಸಮಾಜಕ್ಕೆ ಅಂಬೇಡ್ಕರ್ ಕೊಡುಗೆ ಹಾಗೂ ದುರ್ಬಲರ ಪರವಾಗಿ ಅವರ ಹೋರಾಟವನ್ನು ಬಣ್ಣಿಸುವ ಲೇಖನ ಪ್ರಕಟಿಸಿದೆ. ಅಂಬೇಡ್ಕರ್ ಅವರು ವಿಶಿಷ್ಟ ಕೊಡುಗೆ ಮೂಲಕ, ದೇಶದ ಸಾಮಾಜಿಕ, ಆರ್ಥಿಕ ಅಂಶಗಳ ಮೂಲಕ ಪ್ರಜಾಪ್ರಭುತ್ವ ಹಾಗೂ ರಾಷ್ಟ್ರೀಯತೆಗೆ ಹೊಸ ಕ್ರಿಯಾಶೀಲತೆ ತಂದುಕೊಟ್ಟರು ಎಂದು ಬಣ್ಣಿಸಿದೆ.
ಹಿಂದೂ ಸಂಘಟನೆಯನ್ನು ಮತ್ತಷ್ಟು ವಿಸ್ತೃತಗೊಳಿಸುವ ನೆಪದಲ್ಲಿ ದಲಿತರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ಇದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಜತೆಗೆ ಕ್ರೈಸ್ತ ಧರ್ಮದ ಮತಾಂತರ ತಡೆಯಲು ಹಾಗೂ ಮುಸ್ಲಿಮ್ ಸಂಘಟನೆಗಳು ದಲಿತರ ಜತೆಗೆ ಘಟಬಂಧನ ಸ್ಥಾಪಿಸದಂತೆ ತಡೆಯುವ ಹುನ್ನಾರ ಇದು ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News