ಬಿಜೆಪಿ ಹೊರಗಿಡಲು ನಿತೀಶ್ ಜತೆ 2019ರಲ್ಲೂ ಮೈತ್ರಿ: ಕಾಂಗ್ರೆಸ್

Update: 2016-04-13 14:45 GMT

ಹೈದ್ರಾಬಾದ್: ಬಿಜೆಪಿಯನ್ನು 2019ರ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವ ಸಲುವಾಗಿ ಸಾಧ್ಯವಾದಷ್ಟೂ ಬೃಹತ್ ಮೈತ್ರಿಕೂಟ ರಚನೆಗೆ ಕರೆ ನೀಡಿರುವ ಬಿಹಾರ ಮುಖ್ಯಮಂತ್ರಿ ನಿಲುವನ್ನು ಕಾಂಗ್ರೆಸ್ ಬೆಂಬಲಿಸಿದೆ. ಜೆಡಿಯು ಜತೆ ರಾಷ್ಟ್ರಮಟ್ಟದಲ್ಲೂ ಕಾರ್ಯನಿರ್ವಹಿಸಲು ಪಕ್ಷ ಸಿದ್ಧವಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಘೋಷಿಸಿದ್ದಾರೆ.

"2019ರ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸೇರಿದಂತೆ ಬೃಹತ್ ಮೈತ್ರಿಕೂಟ ರಚಿಸಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕು ಎಂಬ ನಿತೀಶ್ ಸಲಹೆಗೆ ದಿಗ್ವಿಜಯ ಸಿಂಗ್ ಬೆಂಬಲ ವ್ಯಕ್ತಪಡಿಸಿದರು.

"ಈ ದೇಶ ಜಾತ್ಯತೀತವಾಗಿ ಉಳಿಯಬೇಕು ಎಂದು ನಾವು ಬಯಸುತ್ತೇವೆ. ಕೇವಲ ಒಂದು ವರ್ಗಕ್ಕೆ ಮಾತ್ರವಲ್ಲದೇ, ಇಡೀ ಜನ ಸಮುದಾಯಕ್ಕೆ ಹೊಣೆಗಾರಿಕೆ ಹಾಗೂ ಉತ್ತರದಾಯಿತ್ವ ಇರಬೇಕು. ಆದ್ದರಿಂದ ದೇಶವನ್ನು ಒಗ್ಗಟ್ಟಿನಲ್ಲಿ ಉಳಿಸುವ, ದೇಶದ ಸಂವಿಧಾನದಲ್ಲಿ ನಂಬಿಕೆ ಇಟ್ಟ ಎಲ್ಲ ಪಕ್ಷಗಳ ಜತೆ ಕೈಜೋಡಿಸಲು ನಾವು ಸಿದ್ಧ. ನಮ್ಮದು ಸೇರ್ಪಡೆ ರಾಜಕಾರಣವೇ ಹೊರತು ಬೇರ್ಪಡೆ ರಾಜಕಾರಣ ಅಲ್ಲ" ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದರು.

"ಬಿಜೆಪಿ ಜತೆ ನಿಕಟವಾಗಿ ಸಂಪರ್ಕ ಹೊಂದಿದ್ದ ನಿತೀಶ್ ಅವರಿಗೆ ಈಗ ವಾಸ್ತವ ಅರಿವಾಗಿರುವ ಬಗ್ಗೆ ನಮಗೆ ಸಂತಸವಿದೆ. ಎಲ್ಲ ಪಕ್ಷಗಳೂ ಕಾಂಗ್ರೆಸ್ ಸನಿಹಕ್ಕೆ ಬಂದಿದ್ದು, ಬಿಜೆಪಿಯಂಥ ಕೋಮು ಶಕ್ತಿಗಳಿಂದ ಏನೂ ಸಾಧನೆಯಾಗದು ಎನ್ನುವ ಕಾಂಗ್ರೆಸ್ ನಿಲುವನ್ನು ಎಲ್ಲ ಪಕ್ಷಗಳೂ ಒಪ್ಪಿಕೊಂಡಿರುವುದು ಸಂತಸದ ವಿಚಾರ ಎಂದು ಹೇಳಿದರು.

ಜೆಡಿಯು ಅಧ್ಯಕ್ಷರಾಗಿ ಭಾನುವಾರ ಆಯ್ಕೆಯಾದ ನಿತೀಶ್, ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ಬೆಳೆಯುವ ಸಾಧ್ಯತೆಯ ಬಗ್ಗೆ ಪ್ರಶ್ನಿಸಿದಾಗ, "ಪ್ರತಿಯೊಬ್ಬರಿಗೂ ರಾಷ್ಟ್ರೀಯ ನಾಯಕರಾಗಿ ಆಯ್ಕೆಯಾಗುವ ಅರ್ಹತೆ ಇದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳುವವರು ಮಾತ್ರ ದೇಶದ ಜನತೆ" ಎಂದು ಉತ್ತರಿಸಿದರು. 2014ರ ಚುನಾವಣೆ ಬಳಿಕ 22 ತಿಂಗಳುಗಳಲ್ಲಿ ಕಾಂಗ್ರೆಸ್ ಪಕ್ಷ ಪುನಶ್ಚೇತನ ಪಡೆಯಲು ವಿಫಲವಾಗಿದೆ ಎಂಬ ವಾದವನ್ನು ಅವರು ತಳ್ಳಿಹಾಕಿದರು.

"ಕೆಲ ರಾಜ್ಯಗಳಲ್ಲಿ ನಾವು ಬಿಜೆಪಿ ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ಮೋದಿ ಹಾಗೂ ಬಿಜೆಪಿಯ ಸುಳ್ಳು ಆಶ್ವಾಸನೆಗಳನ್ನು ಜನ ಅರ್ಥ ಮಾಡಿಕೊಳ್ಳಲು ಇನ್ನೂ ಒಂದಷ್ಟು ಸಮಯಾವಕಾಶ ಬೇಕು. ಮೋದಿ ನಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ಜನಸಾಮಾನ್ಯರ ಗಮನಕ್ಕೆ ಬರುವ ದಿನ ದೂರವಿಲ್ಲ" ಎಂದರು.

ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಕೇರಳದಲ್ಲಿ ಅದರ ವಿರುದ್ಧ ಹೋರಾಡುತ್ತಿರುವ ಇಬ್ಬಂದಿತನದ ಬಗ್ಗೆ ಪ್ರಶ್ನಿಸಿದಾಗ, "ಸಮಾನ ಮನಸ್ಕ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವುದು ಸ್ಥಳೀಯ ನಾಯಕತ್ವಕ್ಕೆ ಬಿಟ್ಟ ವಿಚಾರ. ಆದ್ದರಿಂದ ಇಲ್ಲಿ ವೈರುದ್ಧ್ಯದ ಪ್ರಶ್ನೆ ಉದ್ಭವಿಸುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಮಮತಾ ಅವರ ಕಾರ್ಯವೈಖರಿಯ ಹಿನ್ನೆಲೆಯಲ್ಲಿ ಎಡಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ" ಎಂದು ಹೇಳಿದರು.

ರಾಹುಲ್ ಗಾಂಧಿ ಪಕ್ಷದ ಅತ್ಯುನ್ನತ ಹುದ್ದೆ ಅಲಂಕರಿಸುವ ಸಾಧ್ಯತೆ ಬಗ್ಗೆ ಕೇಳಿದಾಗ, "ಯಾರೂ ಅವರನ್ನು ವಿರೋಧ ಮಡುತ್ತಿಲ್ಲ. ಆದರೆ ಯಾವಾಗ ಆ ನಿರ್ಧಾರ ಕೈಗೊಳ್ಳಬೇಕು ಎನ್ನುವುದನ್ನು ಅದು ಅವಲಂಬಿಸಿದೆ. ಅದನ್ನು ಪಕ್ಷದ ಅಧ್ಯಕ್ಷರು ನಿರ್ಧರಿಸುತ್ತಾರೆ" ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News