ಮಲ್ಯ ಪಾಸ್‌ಪೋರ್ಟ್ ರದ್ದತಿಗೆ ಜಾರಿ ನಿರ್ದೇಶನಾಲಯ ಆಗ್ರಹ

Update: 2016-04-13 15:15 GMT

ಹೊಸದಿಲ್ಲಿ: ಐಡಿಬಿಐ ಸಾಲ ವಂಚನೆ ಪ್ರಕರಣ ಸಂಬಂಧ ಉದ್ಯಮಿ, ಮದ್ಯ ದೊರೆ ವಿಜಯ ಮಲ್ಯ ಅವರ ಪಾಸ್‌ಪೋರ್ಟ್ ರದ್ದು ಮಾಡಬೇಕು ಎಂದು ಕಾನೂನು ಜಾರಿ ನಿರ್ದೇಶನಾಲಯ ಆಗ್ರಹಪಡಿಸಿದೆ.

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಪಾಸ್‌ಪೋರ್ಟ್ ಪ್ರಾಧಿಕಾರಕ್ಕೆ ಈ ಬಗ್ಗೆ ಪತ್ರ ಬರೆಯಲಾಗಿದೆ. ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಅವರ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಲು ಕೋರಿದೆ. ಮೂರು ಬಾರಿ ನಿರ್ದೇಶನಾಲಯ ಸಮನ್ಸ್ ನೀಡಿದರೂ, ಮಲ್ಯ ಹಾಜರಾಗದಿರುವುದನ್ನು ಇಲ್ಲಿ ಸಮರಿಸಬಹುದು.

ಸಾಲಗಳ ವಿಲೇವಾರಿ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಮಲ್ಯ, ಕಾನೂನು ಜಾರಿ ನಿರ್ದೇಶನಾಲಯದ ಮುಂಬೈ ತನಿಖಾಧಿಕಾರಿಗಳಿಗೆ ಕಳೆದ ವಾರ ಸ್ಪಷ್ಟಪಡಿಸಿದ್ದರು. ಅದಾಗ್ಯೂ ತನಿಖೆ ಮುಂದುವರಿಸುವಂತೆ ಅವರು ಸಲಹೆ ಮಾಡಿದ್ದರು.

ಮಾರ್ಚ್ 18 ಮತ್ತು ಏಪ್ರಿಲ್ 2ರಂದು ಹಾಜರಾಗಲು ವಿಫಲವಾದ ಹಿನ್ನೆಲೆಯಲ್ಲಿ ಏಪ್ರಿಲ್ 9ರಂದು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿತ್ತು. ದೇಶದ ಹಲವು ಬ್ಯಾಂಕುಗಳಿಂದ 9000 ಕೋಟಿ ರೂಪಾಯಿ ಸಾಲ ಪಡೆದಿರುವ ಮಲ್ಯ, ಮರುಪಾವತಿ ಮಾಡಲು ವಿಫಲರಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನಲ್ಲಿ ದಾವೆ ನಡೆಯತ್ತಿದೆ. ಮಲ್ಯ ಹಾಗೂ ಅವರ ಕುಟುಂಬ ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಹೊಂದಿರುವ ಎಲ್ಲ ಆಸ್ತಿ ವಿವರವನ್ನು ಏಪ್ರಿಲ್ 21ರೊಳಗೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಮಲ್ಯ ಅವರಿಗೆ ಸೂಚಿಸಿತ್ತು. ಮಲ್ಯ ಮಾರ್ಚ್ 2ರಂದು ಲಂಡನ್‌ಗೆ ಪಲಾಯನ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News