ಪನಾಮ ಕಾನೂನು ಕಂಪೆನಿಯ ಮೇಲೆ ದಾಳಿ
ಪನಾಮ ಸಿಟಿ, ಎ. 13: ಯಾವುದಾದರೂ ಕಾನೂನುಬಾಹಿರ ಚಟುವಟಿಕೆಗಳು ನಡೆದಿವೆಯೇ ಎಂಬುದನ್ನು ಪತ್ತೆಹಚ್ಚುವುದಕ್ಕಾಗಿ ಕಾನೂನು ನೆರವು ಸಂಸ್ಥೆ ಮೊಸಾಕ್ ಫೊನ್ಸೆಕದ ಕಚೇರಿಗಳ ಮೇಲೆ ಪನಾಮದ ಅಟಾರ್ನಿ ಜನರಲ್ ಮಂಗಳವಾರ ದಾಳಿ ನಡೆಸಿದರು ಎಂದು ಅಧಿಕಾರಿಗಳು ಹೇಳಿಕೆಯೊಂದರಲ್ಲಿ ತಿಳಿಸಿದರು.
ಪನಾಮದ ಕಾನೂನು ಸಂಸ್ಥೆಯು ‘‘ಪನಾಮ ದಾಖಲೆ’’ಗಳ ಸೋರಿಕೆ ಹಗರಣದ ಕೇಂದ್ರದಲ್ಲಿದೆ. ಜಗತ್ತಿನ ಹಲವಾರು ರಾಜಕೀಯ ನಾಯಕರು ಮತ್ತು ಶ್ರೀಮಂತರು ತಮ್ಮ ದೇಶಗಳಲ್ಲಿ ತೆರಿಗೆ ತಪ್ಪಿಸಿ ತೆರಿಗೆಗಳ್ಳರ ಸ್ವರ್ಗಗಳಲ್ಲಿ ಹಣ ಹೂಡಿರುವುದು ಸೋರಿಕೆಗಳಿಂದ ಬಹಿರಂಗವಾಗಿತ್ತು. ಇಂಥವರ ವಿದೇಶಿ ಹೂಡಿಕೆಗಳಿಗೆ ಪನಾಮ ಕಾನೂನು ಸಂಸ್ಥೆಯು ವ್ಯವಸ್ಥೆ ಮಾಡಿಕೊಟ್ಟಿತ್ತು.
ತೆರಿಗೆ ತಪ್ಪಿಸುವುದು ಮತ್ತು ವಂಚನೆ ಆರೋಪಗಳನ್ನು ಈ ಸಂಸ್ಥೆ ಎದುರಿಸುತ್ತಿದೆ. ಪ್ರಾಸಿಕ್ಯೂಟರ್ ಝೇವಿಯರ್ ಕರ್ವಾಲೊ ನೇತೃತ್ವದಲ್ಲಿ ಮಂಗಳವಾರ ಮಧ್ಯಾಹ್ನ ಕಂಪೆನಿಯ ಕಟ್ಟಡದ ಮೇಲೆ ದಾಳಿ ನಡೆಸಲಾಯಿತು. ಅದೇ ವೇಳೆ, ತನ್ನ ಕಾನೂನು ಕಂಪೆನಿಯು ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ, ಯಾವುದೇ ದಾಖಲೆಗಳನ್ನು ನಾಶಪಡಿಸಿಲ್ಲ ಹಾಗೂ ಅದರ ಎಲ್ಲ ಚಟುವಟಿಕೆಗಳು ಕಾನೂನುಬದ್ಧವಾಗಿವೆ ಎಂಬುದಾಗಿ ಮೊಸಾಕ್ ಫೊನ್ಸೆಕ ಕಂಪೆನಿಯ ಸ್ಥಾಪಕ ಪಾಲುದಾರ ರ್ಯಾಮನ್ ಫೊನ್ಸೆಕ ಹೇಳಿದರು.