×
Ad

ಎಚ್-1ಬಿ ವೀಸಾಗಳಿಗಾಗಿ 2.36 ಲಕ್ಷ ಅರ್ಜಿ

Update: 2016-04-13 23:25 IST

ವಾಶಿಂಗ್ಟನ್, ಎ. 13: ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಿಗೆ ಅಮೆರಿಕ ನೀಡುವ ಎಚ್-1ಬಿ ಉದ್ಯೋಗ ವೀಸಾಗಳಿಗಾಗಿ ಅರ್ಜಿ ಸಲ್ಲಿಕೆ ಆರಂಭಗೊಂಡ ಕೇವಲ ಐದು ದಿನಗಳಲ್ಲಿ 2.36 ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ.
ಪ್ರಕ್ರಿಯೆ ಈ ತಿಂಗಳ ಆದಿಯಲ್ಲಿ ಆರಂಭಗೊಂಡಿದ್ದು ಕಂಪ್ಯೂಟರೀಕೃತ ಚೀಟಿ ಎತ್ತುವ ಕಾರ್ಯವೂ ಪೂರ್ಣಗೊಂಡಿದೆ. ಅತ್ಯಂತ ಪರಿಣತ ಕೆಲಸಗಾರರಿಗೆ ವರ್ಷಕ್ಕೆ 65,000 ಇಂಥ ವೀಸಾಗಳನ್ನು ಸಾಮಾನ್ಯ ವರ್ಗದಲ್ಲಿ ನೀಡಲು ಅಮೆರಿಕದ ಕಾಂಗ್ರೆಸ್ ಅನುಮೋದನೆ ನೀಡಿದೆ. ಆದರೆ, ಇದರ ಮೂರು ಪಟ್ಟಿಗಿಂತಲೂ ಅಧಿಕ ಅರ್ಜಿಗಳು ಬಂದಿವೆ.
ಅದೇ ವೇಳೆ, ಅಮೆರಿಕದ ಶಿಕ್ಷಣ ಸಂಸ್ಥೆಯೊಂದರಲ್ಲಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (ಎಸ್‌ಟಿಇಎಂ) ವಿಷಯಗಳನ್ನು ಕಲಿಯುವ 20,000 ವಿದೇಶಿ ವಿದ್ಯಾರ್ಥಿಗಳಿಗೆ ಎಚ್-1ಬಿ ವೀಸಾಗಳನ್ನು ನೀಡಲಾಗುತ್ತದೆ. ಈ ವರ್ಗದಲ್ಲೂ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿಗಳು ಬಂದಿವೆ ಎಂದು ಯುಎಸ್ ಸಿಟಿಝನ್‌ಶಿಪ್ ಆ್ಯಂಡ್ ಇಮಿಗ್ರೇಶನ್ ಸರ್ವಿಸಸ್ (ಯುಎಸ್‌ಸಿಐಎಸ್) ಮಂಗಳವಾರ ಘೋಷಿಸಿದೆ.

ಎಪ್ರಿಲ್ 1ರಂದು ಆರಂಭಗೊಂಡ ಅರ್ಜಿ ಸಲ್ಲಿಕೆ ಅವಧಿಯಲ್ಲಿ ಯುಎಸ್‌ಸಿಐಎಸ್ 2,36,000ಕ್ಕೂ ಅಧಿಕ ಎಚ್-1ಬಿ ಅರ್ಜಿಗಳನ್ನು ಪಡೆದಿದೆ ಎಂದು ಮಾಧ್ಯಮ ಹೇಳಿಕೆಯೊಂದು ತಿಳಿಸಿದೆ. ಸಾಮಾನ್ಯ ವರ್ಗದ 65,000 ವೀಸಾಗಳು ಹಾಗೂ ಅಡ್ವಾನ್ಸ್‌ಡ್ ಡಿಗ್ರಿ ಎಕ್ಸೆಂಪ್ಶನ್‌ನಡಿ 20,000 ವೀಸಾಗಳ ವಿತರಣೆಗೆ ಫಲಾನುಭವಿಗಳನ್ನು ಆರಿಸಲು ಎಪ್ರಿಲ್ 9ರಂದು ಕಂಪ್ಯೂಟರ್ ಆಧಾರಿತ ಲಾಟರಿ ಪ್ರಕ್ರಿಯೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News