×
Ad

ಅಮೆರಿಕ ವೀಸಾ ಶುಲ್ಕ ಹೆಚ್ಚಳ ತಾರತಮ್ಯಕಾರಿ: ಜೇಟ್ಲಿ

Update: 2016-04-14 20:08 IST

ವಾಶಿಂಗ್ಟನ್, ಎ. 14: ಅಮೆರಿಕ ತನ್ನ ವೀಸಾ ಶುಲ್ಕವನ್ನು ಏರಿಸಿರುವುದಕ್ಕೆ ಭಾರತ ಕಳವಳ ವ್ಯಕ್ತಪಡಿಸಿದೆ. ಇದು ‘‘ತಾರತಮ್ಯದಿಂದ ಕೂಡಿದೆ’’ ಹಾಗೂ ಐಟಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ಅಮೆರಿಕದ ವಾಣಿಜ್ಯ ಪ್ರತಿನಿಧಿ ರಾಯಭಾರಿ ಮೈಕಲ್ ಫ್ರೋಮನ್ ಜೊತೆಗೆ ಇಲ್ಲಿ ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರಿಗೆ ಪ್ರಯೋಜನವಾಗುವ ‘ಟೋಟಲೈಸೇಶನ್ ಒಪ್ಪಂದ’ವನ್ನು ಶೀಘ್ರವಾಗಿ ಅಂತಿಮಗೊಳಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು.

ವೀಸಾ ವಿವಾದದ ಬಗ್ಗೆ ಪ್ರಸ್ತಾಪಿಸಿದ ಅವರು, ಎಚ್-1ಬಿ ಮತ್ತು ಎಲ್1 ವೀಸಾ ಶುಲ್ಕಗಳಲ್ಲಿ ಮಾಡಲಾದ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ‘‘ವೀಸಾ ಶುಲ್ಕದಲ್ಲಿ ಮಾಡಿದ ಹೆಚ್ಚಳವು ತಾರತಮ್ಯ ಧೋರಣೆಯಾಗಿದ್ದು, ಮುಖ್ಯವಾಗಿ ಭಾರತೀಯ ಮಾಹಿತಿ ತಂತ್ರಜ್ಞಾನ (ಐಟಿ) ಕಂಪೆನಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ತೆಗೆದುಕೊಳ್ಳಲಾಗಿದೆ’’ ಎಂದರು.

9/11 ಆರೋಗ್ಯ ರಕ್ಷಣೆ ಕಾಯ್ದೆ ಮತ್ತು ಬಯೋಮೆಟ್ರಿಕ್ ನಿಗಾ ವ್ಯವಸ್ಥೆಗೆ ಹಣ ಹೊಂದಿಸುವುದಕ್ಕಾಗಿ ಕಳೆದ ವರ್ಷ ಅಮೆರಿಕ ಕಾಂಗ್ರೆಸ್ ಎಚ್-1ಬಿ ಮತ್ತು ಎಲ್1 ವೀಸಾಗಳಿಗೆ 4,500 ಡಾಲರ್‌ವರೆಗೆ ವಿಶೇಷ ದರ ವಿಧಿಸಿತ್ತು. ಈ ವೀಸಾಗಳು ಭಾರತೀಯ ಐಟಿ ಕಂಪೆನಿಗಳಲ್ಲಿ ಜನಪ್ರಿಯವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News