ಮಧ್ಯಮ ವ್ಯಾಪ್ತಿಯ ಕ್ಷಿಪಣಿ ಹಾರಾಟಕ್ಕೆ ಉತ್ತರ ಕೊರಿಯ ಸಿದ್ಧತೆ
ಸಿಯೋಲ್, ಎ. 14: ಉತ್ತರ ಕೊರಿಯವು ಒಂದು ಅಥವಾ ಎರಡು ಮಧ್ಯಮ ವ್ಯಾಪ್ತಿಯ ಪ್ರಕ್ಷೇಪಕ ಕ್ಷಿಪಣಿಗಳನ್ನು ಪೂರ್ವ ಕರಾವಳಿಯಲ್ಲಿ ನಿಯೋಜಿಸಿದೆ ಹಾಗೂ ದೇಶದ ಸ್ಥಾಪಕನ ಜನ್ಮ ವಾರ್ಷಿಕ ದಿನವಾದ ಶುಕ್ರವಾರ ಅಥವಾ ಅದರ ಆಸುಪಾಸಿನಲ್ಲಿ ಉಡಾಯಿಸಲು ಸಿದ್ಧತೆ ನಡೆಸುತ್ತಿರುವ ಸಾಧ್ಯತೆಯಿದೆ ಎಂದು ದಕ್ಷಿಣ ಕೊರಿಯದ ಯೊನ್ಹಾಪ್ ವಾರ್ತಾ ಸಂಸ್ಥೆ ವರದಿ ಮಾಡಿದೆ.
ಒಂದು ಅಥವಾ ಎರಡು ಮುಸುಡನ್ ಕ್ಷಿಪಣಿಗಳನ್ನು ಹೊತ್ತೊಯ್ಯುತ್ತಿದ್ದ ಸಂಚಾರಿ ಉಡಾವಕವೊಂದನ್ನು ಗಮನಿಸಲಾಗಿದೆ ಎಂದು ದಕ್ಷಿಣ ಕೊರಿಯದ ಅಧಿಕಾರಿಗಳನ್ನು ಉಲ್ಲೇಖಿಸಿ ಯೊನ್ಹಾಪ್ ವರದಿ ಮಾಡಿದೆ.
3,000 ಕಿ.ಮೀ.ಗಿಂತಲೂ ಅಧಿಕ ಹಾರಾಟ ವ್ಯಾಪ್ತಿಯನ್ನು ಹೊಂದಿರುವ ಮುಸುಡನ್ ಕ್ಷಿಪಣಿಯನ್ನು ಹಾರಾಟ ಪರೀಕ್ಷೆಗೆ ಒಳಪಡಿಸಿರುವ ಬಗ್ಗೆ ಮಾಹಿತಿಯಿಲ್ಲ ಎಂದು ದಕ್ಷಿಣ ಕೊರಿಯದ ರಕ್ಷಣಾ ಸಚಿವಾಲಯ ಮತ್ತು ಪರಿಣತರು ಹೇಳುತ್ತಾರೆ.
ಅಮೆರಿಕವನ್ನು ಗುರಿಯಾಗಿಸಿ ಉತ್ತರ ಕೊರಿಯವು ಖಂಡಾಂತರ ಪ್ರಕ್ಷೇಪಕ ಕ್ಷಿಪಣಿಯನ್ನು ತಯಾರಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ, ಅದು ಶೀಘ್ರದಲ್ಲೇ ಮುಸುಡನ್ ಕ್ಷಿಪಣಿಯ ಹಾರಾಟ ಪರೀಕ್ಷೆ ನಡೆಸಬಹುದು ಎಂದು ಕೆಲವು ಪರಿಣತರು ಹೇಳುತ್ತಾರೆ.
ಹೆಚ್ಚೆಚ್ಚು ಪರಮಾಣು ಪರೀಕ್ಷೆಗಳನ್ನು ನಡೆಸಬೇಕೆನ್ನುವ ಉತ್ತರ ಕೊರಿಯದ ಅಧ್ಯಕ್ಷ ಕಿಮ್ ಜಾಂಗ್ ಉನ್‌ರ ಆದೇಶದ ಹಿನ್ನೆಲೆಯಲ್ಲಿ, ಆ ದೇಶದ ಕಡೆಯಿಂದ ಯಾವಾಗ ಬೇಕಾದರೂ ಕ್ಷಿಪಣಿ ಹಾರುವ ಸಾಧ್ಯತೆಯಿದೆ. ಹಾಗಾಗಿ, ದಕ್ಷಿಣ ಕೊರಿಯದ ಸೇನೆಯನ್ನು ಕಟ್ಟೆಚ್ಚರದಲ್ಲಿ ಇಡಲಾಗಿದೆ ಎಂದು ದಕ್ಷಿಣ ಕೊರಿಯದ ರಕ್ಷಣಾ ಸಚಿವಾಲಯದ ವಕ್ತಾರ ಮೂನ್ ಸಂಗ್-ಗ್ಯುನ್ ಹೇಳಿದರು.